ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಜಿಲ್ಲಾಮಟ್ಟದ ತರಬೇತಿ ಶಿಬಿರ ಉದ್ಘಾಟಿಸಿ ಸಂಜೀವ ಪೂಜಾರಿ ಅಭಿಪ್ರಾಯ
ಬಂಟ್ವಾಳ: ಸಹಕಾರಿ ಕ್ಷೇತ್ರವೂ ಸೇರಿದಂತೆ ಎಲ್ಲ ವಿಷಯಗಳಲ್ಲೂ ಕಾನೂನುಗಳು ಬದಲಾಗುತ್ತಿದ್ದಂತೆಯೇ ಸಹಕಾರಿ ಕ್ಷೇತ್ರದಲ್ಲಿ ಸಿಬ್ಬಂದಿಗಳಿಗೆ ಅನೇಕ ಸವಾಲುಗಳು ಎದುರಾಗುತ್ತಿರುತ್ತವೆ. ಈ ನಿಟ್ಟಿನಲ್ಲಿ ಕಾನೂನು ಅರಿವು ಮೂಡಿಸುವುದರ ಜೊತೆಗೆ ಗ್ರಾಹಕರೊಂದಿಗೆ ಉತ್ತಮ ವ್ಯವಹಾರ ಮಾಡಲು ಇಂತಹ ತರಬೇತಿ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರೂ, ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲದ ಅಧ್ಯಕ್ಷರೂ ಆಗಿರುವ ಕೆ. ಸಂಜೀವ ಪೂಜಾರಿ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಳ ನಿ., ಬಿ.ಸಿ. ರೋಡ್, ಸಹಕಾರ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪತ್ತಿನ, ಮೂರ್ತೆದಾರರ ಮತ್ತು ಇತರ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಶನಿವಾರ ಬಿ.ಸಿ.ರೋಡು ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡ ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಯೂನಿಯನ್ ನಿರ್ದೇಶಕರಾದ ಬಳಿಕ ಸಹಕಾರಿ ಸಂಘದ ಸಿಬ್ಬಂದಿಗಳಿಗೆ ಜಿಲ್ಲಾಮಟ್ಟದ ತರಬೇತಿ ಹಮ್ಮಿಕೊಳ್ಳಬೇಕೆಂಬ ಬೇಡಿಕೆಗೆ ಜಿಲ್ಲಾ ಸಹಕಾರಿ ಯೂನಿಯನ್ ಅವಕಾಶ ಮಾಡಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಸಂಜೀವ ಪೂಜಾರಿಯವರು ತಿಳಿಸಿದರು.
ಮುಖ್ಯ ಅತಿಥಿ ಸಹಕಾರ ಸಂಘಗಳ ಮಂಗಳೂರು ಉಪ ವಿಭಾಗ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಮಾತನಾಡಿ, ಇಂತಹ ತರಬೇತಿಗಳಿಂದ ಸಹಕಾರ ಇಲಾಖೆಯಲ್ಲಿ ಆವಾಗಾವಾಗ ನಡೆಯುವ ಬದಲಾವಣೆಗಳು, ಹೊಸ ಹೊಸ ತಿದ್ದುಪಡಿಗಳ ಅರಿವಾಗುತ್ತದೆ. ತರಬೇತಿ ಎಂದರೆ ರಿಫ್ರೆಶ್ ಮೆಂಟ್ ಇದ್ದಂತೆ. ಇದರ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಮಾತನಾಡಿ, ಹೊಸ ಹೊಸ ರೀತಿಯ ಕಾನೂನು, ವ್ಯವಸ್ಥೆಗಳು ಬರುತ್ತಿವೆ. ಇವತ್ತಿನ ತರಬೇತಿ ಉತ್ತಮ ಮಾಹಿತಿ ನೀಡುವ ಕಾರ್ಯಕ್ರಮವಾಗಿದೆ ಎಂದು ಬಣ್ಣಿಸಿದರು.


ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೋಟ್ಟು ಮಾತನಾಡಿ ನಾವು ಕಲಿತು ಬಂದಿದ್ದೇವೆ ಎಂಬ ಭಾವನೆ ಇರುವುದು ಸಹಜ. ಆದರೆ ಪ್ರತಿದಿನವೂ ವ್ಯವಸ್ಥೆ ಬದಲಾಗುತ್ತಿರುತ್ತದೆ. ಸಹಕಾರ ಕ್ಷೇತ್ರ ಎಂದರೆ ಪವಿತ್ರವಾದ ಕ್ಷೇತ್ರ. ಸಾಂದರ್ಭಿಕವಾಗಿ ಆಧಾರ, ಭದ್ರತೆ ನೋಡಿ ಸಾಲ ನೀಡಬೇಕಾದ ವ್ಯವಸ್ಥೆ ಇದೆ. ಸಾಲ ಪಡೆದುಕೊಳ್ಳುವಾಗ ಇರುವ ಉತ್ಸಾಹ ಅದನ್ನು ಮರು ಪಾವತಿ ಮಾಡುವಾಗಲೂ ಇರಬೇಕು. ಈಗಿನ ಕಾಲಘಟ್ಟದಲ್ಲಿ ಚಿನ್ನ ಅಡಮಾನ ಸಾಲ ನೀಡುವಾಗ ಬಹಳಷ್ಟು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಸವಿತಾ ಎನ್ ಶೆಟ್ಟಿ, ದ.ಕ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಉಪಾಧ್ಯಕ್ಷ ರಾಜೇಶ್ ಸುವರ್ಣ, ಸಂಪನ್ಮೂಲ ವ್ಯಕ್ತಿಗಳಾದ ವಸಂತ ಅಡ್ಯಂತಾಯ, ಜಗದೀಶ್ ರಾಮ ಮೊದಲಾದವರು ಉಪಸ್ಥಿತರಿದ್ದರು. ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಸಿಇಓ ಎಸ್ ವಿ ಹಿರೇಮಠ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮೂರ್ತೆದಾರರ ಮಹಾಮಂಡಲ ಸಿಇಓ ಕಿಶೋರ್ ಕುಮಾರ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

