ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ 100ನೇ ಉಚಿತ ಆರೋಗ್ಯ ಶಿಬಿರದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅಭಿಪ್ರಾಯ
ಮಂಗಳೂರು: ಸಹಕಾರ ಕ್ಷೇತ್ರದ ವಿವಿಧ ಚಿಂತನೆಯಿಟ್ಟುಕೊಂಡು ಸಾಮಾಜಿಕವಾದ ಚಿಂತನೆ ಇಟ್ಟುಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಅದ್ಭುತವಾದುದನ್ನು ಸಾಧಿಸಿ ಜನರ ಪ್ರೀತಿಗೆ ಪಾತ್ರವಾಗಿ ಯಶಸ್ವಿಯಾಗಿ ಕೆಲಸ ಮಾಡಬಹುದು ಎಂಬುದನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ತೋರಿಸಿದೆ. ಸ್ಪಷ್ಟವಾದ ನಾಯಕತ್ವ, , ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸಾಮಾಜಿಕ ಚಿಂತನೆಯ ಮನೋಭಾವ, ಪರಸ್ಪರ ಸಹಕಾರ ಇದಕ್ಕೆ ಪ್ರಮುಖ ಕಾರಣ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಚೇರಿ ಪಡೀಲಿನ ಆತ್ಮಶಕ್ತಿ ಸೌಧದಲ್ಲಿ ಭಾನುವಾರ ಉಚಿತ ಆರೋಗ್ಯ ಶಿಬಿರದ 100ನೇ ಶಿಬಿರ ಆರೋಗ್ಯ ಸೇವಾ ಸಂಗಮದ ಅಂಗವಾಗಿ ಹಮ್ಮಿಕೊಂಡ ಬೃಹತ್ ಉಚಿತ ವೈದ್ಯಕೀಯ, ನೇತ್ರ, ದಂತ ತಪಾಸಣೆ ಹಾಗೂ ರಕ್ತದಾನ ಶಿಬಿರ ಮತ್ತು ವೈದ್ಯ ಸೇವಾ ಸಾಧಕರ ಅಭಿನಂದನಾ ಕಾರ್ಯಕ್ರಮ ಹಾಗೂ 14ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಎಂಬುದು ವಿಧಾನಸೌಧದಲ್ಲಿ ಮಾತ್ರ ಇರುವುದಲ್ಲ, ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ಜಾರಿಯಾಗುವುದು ಸಹಕಾರಿ ಸಂಸ್ಥೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪರಸ್ಪರ ಸಹಕಾರ ಮನೋಭಾವ ತೋರಿಸಿದಾಗ ಪ್ರಜಾಪ್ರಭುತ್ವದ ಕಲ್ಪನೆಗಳು ಯಶಸ್ವಿಯಾಗುತ್ತವೆ. ಜನರ ಮಧ್ಯೆ ಕೆಲಸ ಮಾಡಿಕೊಂಡು ಉಚಿತವಾಗಿ ಆರೋಗ್ಯ ತಪಾಸಣೆಯ ಜೊತೆಗೆ ಜನರ ನಡುವೆ ಪರಸ್ಪರ ಪ್ರೀತಿ ವಿಶ್ವಾಸವನ್ನು ತುಂಬುವ ಕೆಲಸವನ್ನು ಆತ್ಮಶಕ್ತಿ ಸಹಕಾರ ಸಂಘ ಮಾಡುತ್ತಿದೆ. ರೋಗ ಬಂದ ಬಳಿಕ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬರದಂತೆ ತಡೆಯುವ ಕೆಲಸಗಳು ಇಂತಹ ಆರೋಗ್ಯ ಶಿಬಿರಗಳ ಮೂಲಕ ನಡೆಯುತ್ತಿದೆಎಂದು ಶ್ಲಾಘಿಸಿದರು. ಜನರು ಇಂಥ ಸೇವಾಕಾರ್ಯಗಳ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.
ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಕಾರ್ಯಕ್ರಮ ಉದ್ಘಾಟಿಸಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ಆರೋಗ್ಯ ಸೇವೆಯ ಮೂಲಕ ಸಾಮಾನ್ಯ ಜನರಿಗೆ ನೆರವಾಗುತ್ತಿರುವುದು ಶ್ಲಾಘನೀಯ. ನಾವು ಮಾಡುವ ಸೇವಾಕಾರ್ಯವು ನಮ್ಮಲ್ಲಿರುವ ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ. ಸಮಾಜದಲ್ಲಿ ಸುಧಾರಣೆ, ಪರಿವರ್ತನೆ ತರಲೂ ಇದರಿಂದ ಸಾಧ್ಯವಿದೆ. ಆತ್ಮಶಕ್ತಿ ಸಹಕಾರ ಸಂಘದಿಂದ ಇನ್ನಷ್ಟು ಉತ್ತಮ ಸೇವಾಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ಸಹಕಾರಿ ಅಧ್ಯಕ್ಷ ‘ಸಹಕಾರ ರತ್ನ‘ ಚಿತ್ತರಂಜನ್ ಬೋಳಾರ್ ಮಾತನಾಡಿ, 2012ರ ಜ.30ರಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ, ಅಂದು ಅವರು ಹೇಳಿದಂತೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಸಮಾಜಮುಖಿಯಾಗಿ 14 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಅಲ್ಪ ಕಾಲಾವಧಿಯಲ್ಲೇ ಇಂದು 33 ಶಾಖೆಗಳನ್ನು ಹೊಂದಿದ್ದು ಉತ್ತಮವಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ನಿರ್ದೇಶಕರು ಕಾರಣ. ಸಾಮಾಜಿಕ ಚಟುವಟಿಕೆಯ ಭಾಗವಾಗಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತ ಬರುತ್ತಿದೆ ಎಂದು ಹೇಳಿದರು.
ಇದುವರೆಗಿನ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿದ ವಿವಿಧ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳ ವೈದ್ಯರುಗಳು, ಸಿಬ್ಬಂದಿಗಳನ್ನು ಗೌರವಿಸಲಾಯಿತು. ಆರೋಗ್ಯ ಶಿಬಿರಗಳಲ್ಲಿ ಸಹಯೋಗ ವಹಿಸಿದ 75ಕ್ಕೂ ಅಧಿಕ ವಿವಿಧ ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು.
ಶಾಸಕ ವೇದವ್ಯಾಸ ಕಾಮತ್, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ವೆನ್ಲಾಕ್ ಆಸ್ಪತ್ರೆ ಜಿಲ್ಲಾ ಅಧೀಕ್ಷಕ ಡಾ| ಶಿವಪ್ರಕಾಶ್ ಡಿ.ಎಸ್., ಐಎಂಎ ರಾಜ್ಯ ಉಪಾಧ್ಯಕ್ಷ ಡಾ| ಎಂ.ಅಣ್ಣಯ್ಯ ಕುಲಾಲ್ ಉಳ್ತೂರು, ಮಾಜಿ ಮೇಯರ್ ಶಶಿಧರ ಹೆಗ್ಡೆ, ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ಅಧ್ಯಕ್ಷ ಡಾ| ಆನಂದ ಬಂಗೇರ, ಐಎಂಎ ಮಂಗಳೂರು ಅಧ್ಯಕ್ಷ ಡಾ| ಸದಾನಂದ ಪೂಜಾರಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ, ಮಾತಾ ಅಮೃತಾನಂದಮಯಿ ಮಠದ ಅಧ್ಯಕ್ಷ ಸುರೇಶ್ ಅಮೀನ್, ಆತ್ಮಶಕ್ತಿ ಸಹಕಾರ ಸಂಘದ ಉಪಾಧ್ಯಕ್ಷ ನೇಮಿರಾಜ್, ನಿರ್ದೇಶಕರಾದ ಬಿ.ಪರಮೇಶ್ವರ ಪೂಜಾರಿ, ಆನಂದ ಎಸ್.ಕೊಂಡಾಣ, ಸೀತಾರಾಮ ಎನ್., ರಮಾನಾಥ ಸನಿಲ್, ಮುದ್ದು ಮೂಡುಬೆಳ್ಳೆ, ದಿವಾಕರ್ ಬಿ.ಪಿ., ಗೋಪಾಲ್ ಎಂ., ಚಂದ್ರಾವತಿ, ಉಮಾವತಿ, ಸಿಇಒ ಸೌಮ್ಯಾ ವಿಜಯ್ ಮೊದಲಾದವರು ಉಪಸ್ಥಿತರಿದ್ದರು. ವಿಶ್ವನಾಥ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ 9.30ರಿಂದ ಮಧ್ಯಾಹ್ನದ ತನಕ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು. ವಿಶೇಷ ತಜ್ಞ ವೈದ್ಯರು ಭಾಗವಹಿಸಿದ್ದರು. ಸ್ತನಪರೀಕ್ಷೆ, ಗರ್ಭಕಂಠ ತಪಾಸಣೆ, ಸಾಮಾನ್ಯ ವೈದ್ಯಕೀಯ ತಪಾಸಣೆ, ಮಧುಮೇಹ ತಪಾಸಣೆ, ಕೀಲು ಗಂಟು ನೋವು ತಪಾಸಣೆ ಸಹಿತ ವಿವಿಧ ಪರೀಕ್ಷೆಗಳು ನಡೆಯಿತು. ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ಮಧ್ಯಾಹ್ನ ಬಳಿಕ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com




