ಬಂಟ್ವಾಳ: ಕರಾವಳಿ ಜಿಲ್ಲೆಗಳ ಬಹುತೇಕ ಅಡಕೆ ಮರಗಳಿಗೆ ಎಲೆಚುಕ್ಕೆ ರೋಗ ಬಾಧಿಸಿದ್ದು ಇದನ್ನೇ ನಂಬಿಕೊಂಡಿರುವ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ರೈತರು ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ ಹಣ ತೀರಿಸಲಾಗದೆ ಪರದಾಡುತ್ತಿದ್ದು, ಇಂಥ ಸಂಕಷ್ಟ ಸ್ಥಿತಿಯಲ್ಲಿರುವ ರೈತರಿಗೆ ಸರಕಾರ ನಷ್ಟ ಪರಿಹಾರ ಒದಗಿಸಿಕೊಡಬೇಕು ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳ ರೈತರ ಪ್ರಮುಖ ಬೆಳೆಯಾದ ಅಡಕೆ ಮರಗಳಿಗೆ ಎಲೆಚುಕ್ಕೆ ರೋಗವು ಕಾಣಿಸಿಕೊಂಡಿದ್ದು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಸಾವಿರಾರು ಅಡಕೆ ಮರಗಳು ಸಾಯುತ್ತಿದ್ದು, ಅಡಕೆ ಇಳುವರಿ ಸಹ ಗಣನೀಯವಾಗಿ ಇಳಿಮುಖವಾಗಿದೆ. ಈ ವರ್ಷ ನಿರಂತರವಾಗಿ ಸುರಿದ ಮಳೆಯ ಪ್ರಭಾವದಿಂದ ಕೊಳೆರೋಗದಿಂದಾಗಿ ಕಂಗೆಟ್ಟಿರುವ ಅಡಕೆ ಬೆಳೆಗಾರರಿಗೆ ಎಲೆಚುಕ್ಕೆ ರೋಗದಿಂದಾಗಿ ಅಡಕೆ ಮರಗಳೇ ಸಾಯುತ್ತಿರುವ ಪರಿಸ್ಥಿತಿಯಲ್ಲಿ ಅಡಕೆ ಬೆಳೆಗಾರರು ಪರ್ಯಾಯ ಮಾರ್ಗವಿಲ್ಲದೆ ಚಿಂತೆಯಲ್ಲಿ ತೊಡಗಿದ್ದಾರೆ. ಕರಾವಳಿ ಜಿಲ್ಲೆಗಳ ಬಹುತೇಕ ಆರ್ಥಿಕ ವ್ಯವಹಾರವು ಅಡಕೆ ಬೆಳೆಗಾರರಿಂದಲೇ ಅವಲಂಬಿತವಾಗಿದ್ದು, ಅಡಿಕೆ ಬೆಳೆಯನ್ನೇ ನಂಬಿರುವ ರೈತರು ಬ್ಯಾಂಕ್ ಗಳಲ್ಲಿ ಸಾಲ ಮಾಡಿದ ಹಣವನ್ನು ಕೃಷಿಗೋಸ್ಕರ ವಿನಿಯೋಗಿಸಿದ್ದು ಈ ಸಂಕಷ್ಟ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿ ಮಾಡಲು ರೈತರಿಗೆ ಕಷ್ಟವಾಗುತ್ತಿದೆ.
ಈ ನಿಟ್ಟಿನಲ್ಲಿ ಸರಕಾರದ ವತಿಯಿಂದ ಅಡಕೆ ತೋಟ ಸಮೀಕ್ಷೆ ನಡೆಸಿ ತೋಟಗಾರಿಕೆ ಬೆಳೆ ಸಂಬಂಧವಾಗಿ ಪಡೆದಿರುವ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಹಾಗೂ ಎಲೆಚುಕ್ಕೆ ರೋಗಕ್ಕೆ ತುತ್ತಾದ ಪ್ರತಿ ಅಡಕೆ ಮರಕ್ಕೆ ಕನಿಷ್ಠ 5 ಸಾವಿರದಂತೆ ಪರಿಹಾರ ನೀಡುವಂತೆ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

