ಮುಡಿಪುವಿನಲ್ಲಿ ಉಚಿತ ನೇತ್ರ ತಪಾಸಣೆ, ಸಾಮಾನ್ಯ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪ್ರಶಾಂತ್ ಕಾಮತ್ ಅಭಿಪ್ರಾಯ
ಮುಡಿಪು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಡಿಪು ಶಾಖೆಯ ಒಂಬತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುರ್ನಾಡು ಇವರ ಜಂಟಿ ಸಹಯೋಗದೊಂದಿಗೆ ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ಕದ್ರಿ ಮಂಗಳೂರು ಇಲ್ಲಿನ ನುರಿತ ವೈದ್ಯರ ತಂಡದವರಿಂದ ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ತಪಾಸಣಾ ಶಿಬಿರವು ಗೋಪಾಲಕೃಷ್ಣ ಸಭಾಗೃಹ ಅಮ್ಮೆಂಬಳ ಮುಡಿಪು ಇಲ್ಲಿ ಜರುಗಿತು.
https://chat.whatsapp.com/FCEnlTkAKCC0MGPhXtX4i4
ಕುರ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮಾ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುರ್ನಾಡು ಘಟಕದ ಅಧ್ಯಕ್ಷರಾದ ಮಮತಾ ಮಾತನಾಡಿ, ಗ್ರಾಮೀಣ ಪ್ರದೇಶ ಹಾಗೂ ಹಿಂದುಳಿದ ನಗರ ಪ್ರದೇಶಗಳಲ್ಲಿ ಇಂತಹ ಶಿಬಿರ ಆಯೋಜನೆ ಮಾಡುವುದು ಒಳ್ಳೆಯ ವಿಷಯ. ಆತ್ಮಶಕ್ತಿ ಸಹಕಾರಿ ಸಂಘವು ಇಂತಹ ಗುಣಮಟ್ಟದ ಶಿಬಿರಗಳನ್ನು ಆಯೋಜಿತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.
ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ವೈದ್ಯರಾದ ಡಾ.ದರ್ಶನ್ ಮಾತನಾಡಿ, ರೋಗ ಬಂದಿರುವವರು ಮಾತ್ರ ಚಿಕಿತ್ಸೆ ಪಡೆಯುವುದಲ್ಲದೇ, ರೋಗ ಬರುವ ಮುಂಚಿತವಾಗಿ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಿಕೊಂಡು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಅತ್ಯಗತ್ಯ. ಶಿಬಿರದಲ್ಲಿ ಲಭ್ಯವಿರುವ ಸೇವೆಗಳನ್ನು ಸದುಪಯೋಗ ಪಡೆಯುವಂತೆ ವಿನಂತಿಸಿದರು.
ಮುಡಿಪು ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟ್ ಸದಸ್ಯರಾದ ಪ್ರಶಾಂತ್ ಕಾಮತ್ ಮಾತನಾಡಿ ಕೆಲಸದ ಒತ್ತಡ ಹಾಗೂ ದೈನಂದಿನ ಕಾರ್ಯಚಟುವಟಿಕೆಗಳಿಂದ ನಮ್ಮ ಆರೋಗ್ಯದತ್ತ ಗಮನ ಹರಿಸಲು ಸಾಧ್ಯವಾಗದ ಕಾರಣ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಂತಹ ಶಿಬಿರಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ತಮ್ಮ ಆರೋಗ್ಯ ತಪಾಸಣೆ ಮಾಡಿದರೆ ಉತ್ತಮ ಜೀವನ ಶೈಲಿ ನಡೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಮುಂದಾಳತ್ವದಲ್ಲಿ ತನ್ನ ಎಲ್ಲಾ ಶಾಖೆಗಳ ವಾರ್ಷಿಕೋತ್ಸವದಂದು ಇಂತಹ ಶಿಬಿರಗಳನ್ನು ಆಯೋಜಿಸುತ್ತಿರುವುದು ಜನಸಾಮಾನ್ಯರಿಗೆ ತುಂಬಾ ಅನುಕೂಲವಾಗಿದೆ” ಎಂದರು.
ಅಧ್ಯಕ್ಷತೆ ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತೀ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತ ಬಂದಿದ್ದು, ಇದು ಸಂಘದ ೯೬ನೇ ಉಚಿತ ವೈದ್ಯಕೀಯ ಶಿಬಿರವಾಗಿದೆ. ಉಚಿತ ಆರೋಗ್ಯ ಶಿಬಿರ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ನಮ್ಮ ಸಹಕಾರಿ ಸಂಘವು ಮುಖ್ಯ ಪಾತ್ರ ವಹಿಸಿದೆ. ಅದೇ ರೀತಿ ಇವತ್ತಿನ ಆರೋಗ್ಯ ಶಿಬಿರವನ್ನು ಏರ್ಪಡಿಸಲು ಸಹಕರಿಸುತ್ತಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುರ್ನಾಡು ಘಟಕ ಇದರ ಸರ್ವ ಪಧಾಧಿಕಾರಿಗಳಿಗೆ ಹಾಗೂ ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ಕದ್ರಿ ಮಂಗಳೂರು ಇದರ ಆಡಳಿತ ವರ್ಗ , ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆ ಸಲ್ಲಿಸಿದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಗೋಪಾಲ್ ಎಮ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಮುಡಿಪು ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟ್ ಸದಸ್ಯರಾದ ಪ್ರಕಾಶ್ ಕಾಮತ್, ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ಕದ್ರಿ ಮಂಗಳೂರು ಇದರ ವೈದ್ಯರಾದ ಡಾ.ಶಾಕ್ಲೆನ್ ಮುಸ್ತಕ್ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ, ಉಚಿತ ಕನ್ನಡಕ ವಿತರಣೆ, ಹಾಗೂ ನೇತ್ರ ತಪಾಸಣೆ ನಡೆಸಲಾಯಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖಾಧಿಕಾರಿ ನಿಶ್ಮಿತಾ ಸ್ವಾಗತಿಸಿ, ಸಂಘದ ಶಾಖಾಧಿಕಾರಿ ಅಕ್ಷತಾ ಕೆ ಧನ್ಯವಾದವಿತ್ತರು. ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಹಿರಿಯ ಶಾಖಾಧಿಕಾರಿ ಸಚಿನ್ ನಿರ್ವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

