ಬಂಟ್ವಾಳ: 2024-25ನೇ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದ ಕರಾವಳಿ ಜಿಲ್ಲೆಗಳಲ್ಲಿನ ಅಡಕೆ ಮತ್ತು ಕರಿಮೆಣಸು ಬೆಳೆಗಳಿಗೆ ಸಂಬಂಧಿಸಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿಯಲ್ಲಿ ಬೆಳೆಗಾರರಿಗೆ ಸಿಗಬೇಕಾದ ಹಣಕಾಸಿನ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವಂತೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಅಡಕೆ ಬೆಳೆಗಾರರು ತಮ್ಮ ಜಮೀನಿನಲ್ಲಿರುವ ಅಡಕೆ ಮತ್ತು ಕರಿಮೆಣಸು ಬೆಳೆಗಳಿಗೆ ಅನುಗುಣವಾಗಿ ಬೆಳೆ ಸಾಲ ಹೊಂದಿರುವ ರೈತರು ಬೆಳೆವಿಮೆ ಕುರಿತು ಪ್ರೀಮಿಯಂ ಪಾವತಿಸಿದ್ದಾರೆ. ಅದರಂತೆ ಈ ವರ್ಷ ಬೆಳೆ ವಿಮೆ ಪರಿಹಾರ ಮೊತ್ತ ದೊರಕುವ ನಿರೀಕ್ಷೆಯಲ್ಲಿದ್ದು ಈ ಹಣದಿಂದಾಗಿ ತೋಟಗಾರಿಕೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ವಿನಿಯೋಗಿಸುವ ನಿಟ್ಟಿನಲ್ಲಿದ್ದಾರೆ. ಪ್ರತಿ ವರ್ಷದಂತೆ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತವು ಆಕ್ಟೋಬರ್ ತಿಂಗಳ ಕೊನೆಯಲ್ಲಿ ಅಥವಾ ನವೆಂಬರ್ ತಿಂಗಳ ಮೊದಲ ವಾರದಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿದ್ದು ಈ ವರ್ಷ ನವೆಂಬರ್ ಮೂರನೇ ವಾರ ಕಳೆದರೂ ರೈತರಿಗೆ ಪರಿಹಾರ ಮೊತ್ತ ಬಿಡುಗಡೆಯಾಗಿರುವುದಿಲ್ಲ ಎಂದು ರೈತರು ವಿಚಾರಿಸುತ್ತಿದ್ದಾರೆ. ಈ ಹಣದಿಂದಲೇ ಅವಲಂಬಿತರಾಗಿರುವ ತೋಟಗಾರಿಕೆ ಕೆಲಸ ಕಾರ್ಯಗಳು ಸ್ಥಗಿತವಾಗಿದ್ದು ಪರಿಹಾರ ಹಣ ಬಿಡುಗಡೆಯಾಗದಿರುವ ಬಗ್ಗೆ ಅಡಕೆ ಬೆಳೆಗಾರರು ಪ್ರಾಥಮಿಕ ಸಹಕಾರ ಸಂಘಗಳಿಗೆ ಹೋಗಿ ವಿಚಾರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳೆ ವಿಮೆ ಪರಿಹಾರ ಮೊತ್ತ ಹಣವನ್ನು ತಕ್ಷಣದಿಂದಲೇ ಬಿಡುಗಡೆ ಮಾಡಿಸಿ , ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ವಿಮಾ ಕಂಪೆನಿಗೆ ನಿರ್ದೇಶನ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಅವರು ಮನವಿ ಮಾಡಿದ್ದಾರೆ.

