ಮಂಗಳೂರು: ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಬುಧವಾರ ಪ್ರಕಟವಾಗಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಿರಿಯ ಸಹಕಾರಿ ಭಾಸ್ಕರ ಕೋಟ್ಯಾನ್ ಇರ್ವತ್ತೂರು ಸೇರಿದಂತೆ ಏಳು ಮಂದಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಸಹಕಾರಿ, ಬೆಳುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ, ಕಂಬಳದ ಸಂಘಟಕರಾದ ಭಾಸ್ಕರ ಕೋಟ್ಯಾನ್ ಕೊಳಕೆ ಇರ್ವತ್ತೂರು, ಸುಳ್ಯದ ಹಿರಿಯ ಸಹಕಾರಿ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷರಾದ ಪಿ.ಸಿ ಜಯರಾಮ, ಪೆರಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ ಕೆ. ಪೆರಾಡಿ, ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಟಿ.ಜಿ ರಾಜಾರಾಮ ಭಟ್, ಮಂಗಳೂರು ಟ್ರಾಲ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಇವರುಗಳನ್ನು ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಉಡುಪಿ ಜಿಲ್ಲೆಯಿಂದ ಕಾರ್ಕಳದ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭು, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್.ರಮೇಶ್ ಶೆಟ್ಟಿ ಅವರಿಗೆ ಸಹಕಾರ ರತ್ನ ಪುರಸ್ಕಾರ ಲಭಿಸಿದೆ.
ನಾಳೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ಗಾಯತ್ರಿ ವಿಹಾರ್‌ನಲ್ಲಿ ನಡೆಯಲಿರುವ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಭಾಸ್ಕರ ಕೋಟ್ಯಾನ್ ಇರ್ವತ್ತೂರು:
ಕೊಳಕೆ ಇರ್ವತ್ತೂರಿನ ಸುಬ್ಬಯ್ಯ ಕೋಟ್ಯಾನ್ -ರತ್ನಾ ಎಸ್ ಕೋಟ್ಯಾನ್ ದಂಪತಿಯ ಪುತ್ರರಾದ ಭಾಸ್ಕರ ಕೋಟ್ಯಾನ್ ಅವರು, 12-09-1956ರಂದು ಜನಿಸಿದ್ದು, ಕೃಷಿ ಹಾಗೂ ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಸಹಕಾರ ಕ್ಷೇತ್ರ, ಕಂಬಳ, ಜಾನಪದ ಕಲೆ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಬೆಳುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದು, ಸತತ ಮೂರನೇ ಅವಧಿಗೆ ಅಧ್ಯಕ್ಷರಾಗಿದ್ದಾರೆ. ಮೂಡುಬಿದಿರೆಯ ಭಾರತ್ ಸೌಹಾರ್ದ ಸಹಕಾರಿ ಸಂಘ ಹಾಗೂ ಮಂಗಳೂರಿನ ನವೋದಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿಯೂ ಸೇವೆಯಲ್ಲಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ಮಂಗಳೂರು, ಮಾಸ್ ಮಂಗಳೂರು, ಸ್ಕ್ಯಾಡ್ಸ್ ಮಂಗಳೂರು ಮತ್ತು ಟಿಎಪಿಸಿಎಂಎಸ್ ಕಾರ್ಕಳ ಇವುಗಳಲ್ಲಿ ನಿರ್ದೇಶಕರಾಗಿದ್ದಾರೆ. ಕಂಬಳ ಕ್ಷೇತ್ರದಲ್ಲೂ ನಿರಂತರ 51 ವರ್ಷಗಳಿಂದ ಕಂಬಳ ಕೋಣಗಳ ಮಾಲೀಕರಾಗಿ ಹಗ್ಗ, ನೇಗಿಲು ಮತ್ತು ಅಡ್ಡಹಲಗೆ ವಿಭಾಗದಲ್ಲಿ 427 ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಕಂಬಳಗಳಲ್ಲಿ ಚಿನ್ನದ ಪದಕ, ಸನ್ಮಾನ, ಕೃಷಿ ಕ್ಷೇತ್ರದಲ್ಲಿ ಕಾರ್ಕಳ ತಾಲೂಕು ಮಟ್ಟದ ಪುರಸ್ಕಾರಗಳು ಲಭಿಸಿವೆ.
ಪಿ.ಸಿ ಜಯರಾಮ:
ಪಿ.ಸಿ ಜಯರಾಮ ಅವರು ಸುಳ್ಯದ ಹಿರಿಯ ಸಹಕಾರಿಗಳಾಗಿದ್ದು, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷರು. ಮಡಪ್ಪಾಡಿ ಸೊಸೈಟಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.
ಸತೀಶ್ ಕೆ. ಪೆರಾಡಿ
ಬೆಳ್ತಂಗಡಿ ತಾಲೂಕಿನ ಪೆರಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ ಕಾಶಿಪಟ್ಣ ಇವರು, ಐದನೇ ಬಾರಿ ಈ ಸಂಘದ ಅಧ್ಯಕ್ಷರಾಗಿದ್ದಾರೆ. ಇಲ್ಲಿನ ಸಹಕಾರ ಸಂಘಕ್ಕೆ ವ್ಯವಹಾರ ಅಭಿವೃದ್ಧಿಯ ದೃಷ್ಟಿಯಿಂದ ವಿಶಾಲವಾದ ಕಚೇರಿ ಸ್ಥಳವನ್ನು ನವೀಕರಿಸಿ ಲೋಕಾರ್ಪಣೆ ಮಾಡಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ, ಬೆಳ್ತಂಗಡಿ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ ಉಪಾಧ್ಯಕ್ಷರಾಗಿ, ಪ್ರಸಕ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರು ಕೃಷಿಕರ ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿದ್ದು, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಟಿ.ಜಿ.ರಾಜಾರಾಮ ಭಟ್
ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಹಿರಿಯ ಸಹಕಾರಿ ಟಿ.ಜಿ ರಾಜಾರಾಮ ಭಟ್ ಅವರು, ಕೃಷಿಕರಾಗಿ, ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಗಾಯತ್ರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷರಾಗಿದ್ದರು. ಮಾಸ್ ಲಿಮಿಟೆಡ್‌ನ ಸ್ಥಾಪಕಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸಕ್ತ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಶಾರದಾ ಗಣಪತಿ ವಿದ್ಯಾಕೇಂದ್ರ ಸ್ಥಾಪಿಸಿ ಪರಿಸರದ ಎಲ್ಲಾ ವರ್ಗದ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುವುದರ ಜೊತೆಗೆ ಅವರ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ.
ಕಡಾರಿ ರವೀಂದ್ರ ಪ್ರಭು
ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭು ಅವರು, ಮೂರು ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಮೂರು ದಶಕಗಳಿಂದ ಸಂಘದ ಅಧ್ಯಕ್ಷರಾಗಿದ್ದು, ೨೦೧೭ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಸಹಕಾರ ಸಪ್ತಾಹದಲ್ಲಿ ಅತ್ಯತ್ತಮ ಸಹಕಾರಿ ಪ್ರಶಸ್ತಿ ಮತ್ತು ಕೆನರಾ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com

