ಅರ್ಬನ್ ಕೋ ಆಪರೇಟಿವ್ ಸೊಸೈಟಿಯ ಅಂತಾರಾಷ್ಟ್ರೀಯ ಸಮ್ಮೇಳನ ಕೋ ಆಪ್ ಕುಂಭ್ -2025 ಉದ್ಘಾಟಿಸಿ ಸಹಕಾರ ಸಚಿವ ಅಮಿತ್ ಷಾ ಘೋಷಣೆ
ನವದಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರದ ಅಡಿಯಲ್ಲಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕುಗಳು ಮತ್ತು ಸಹಕಾರಿ ಸಾಲ ಸಂಘಗಳು ಹೊಸ ಉತ್ಸಾಹದಿಂದ ಕಾರ್ಯನಿರತವಾಗಿವೆ. ಮುಂದಿನ ಐದು ವರ್ಷಗಳಲ್ಲಿ, ಎರಡು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪ್ರತಿ ನಗರಗಳಲ್ಲೂ ಅರ್ಬನ್ ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಹೇಳಿದರು.
ನವದೆಹಲಿಯಲ್ಲಿ ಸೋಮವಾರ ಆರಂಭವಾದ ಅರ್ಬನ್ ಕೋ ಆಪರೇಟಿವ್ ಬ್ಯಾಂಕುಗಳ ಮತ್ತು ಕ್ರೆಡಿಟ್ ವಲಯದ ಸೊಸೈಟಿಗಳ ಅಂತಾರಾಷ್ಟ್ರೀಯ ಸಮ್ಮೇಳನ “ಕೋ-ಆಪ್ ಕುಂಭ್ 2025” ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಹಕಾರ ವಲಯವನ್ನು ಆಧುನೀಕರಿಸಲು, ಅದರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಲು ಸಹಕಾರ ಸಚಿವಾಲಯವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದ ಸಚಿವರು, ಈ ಅಂತಾರಾಷ್ಟ್ರೀಯ ಸಮ್ಮೇಳನದ ‘ದೆಹಲಿ ಘೋಷಣೆ 2025’ ನಗರ ಸಹಕಾರಿ ಬ್ಯಾಂಕುಗಳ ವಿಸ್ತರಣೆಗೆ ಒಂದು ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ಸಹಕಾರ ವಲಯವನ್ನು ಆಧುನೀಕರಿಸಲು, ಅದರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಲು ಸಹಕಾರ ಸಚಿವಾಲಯವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಕಳೆದ ಎರಡು ವರ್ಷಗಳಲ್ಲಿ, ಎನ್‌ಪಿಎಯನ್ನು ಶೇಕಡಾ 2.8ರಿಂದ ಶೇಕಡಾ 0.6ಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅಮಿತ್ ಷಾ ಬೊಟ್ಟು ಮಾಡಿದರು. ಸಹಕಾರಿ ವಲಯದಲ್ಲಿ ಅಮುಲ್ ಮತ್ತು ಇಫ್ಕೋ ಜಾಗತಿಕವಾಗಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಗಳಿಸಿರುವುದು ಕೂಡ ಸಹಕಾರಿ ಸಂಸ್ಥೆಗಳ ಪ್ರಸ್ತುತತೆಗೆ ಪುರಾವೆಯಾಗಿದೆ ಎಂಬುದನ್ನೂ ಅವರು ಬೊಟ್ಟು ಮಾಡಿದರು.
ಅಂತಾರಾಷ್ಟ್ರೀಯ ಸಹಕಾರಿ ವರ್ಷದ ಆಚರಣೆಯ ಗುರುತಾಗಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕುಗಳು ಮತ್ತು ಕ್ರೆಡಿಟ್ ಸಹಕಾರಿ ಸಂಘಗಳ ಸಹಕಾರಿ ಕುಂಭವನ್ನು ಆಯೋಜಿಸಲಾಗುತ್ತಿದೆ. ಕಳೆದ 3–4 ವರ್ಷಗಳಿಂದ ದೇಶದ ನಗರ ಸಹಕಾರಿ ಬ್ಯಾಂಕಿಂಗ್ ವಲಯ ಮತ್ತು ಸಹಕಾರಿ ಕ್ರೆಡಿಟ್ ಸೊಸೈಟಿ ವಲಯವು ಹೊಸ ಉತ್ಸಾಹದಿಂದ ಮುನ್ನಡೆಯುತ್ತಿದೆ. ಪ್ರಸ್ತುತ ಸಮ್ಮೇಳನದಲ್ಲಿ ಈ ವಲಯಕ್ಕೆ ಸಂಬಂಧಿಸಿದ ನೀತಿ, ತಂತ್ರಜ್ಞಾನ ಮತ್ತು ನಾವೀನ್ಯತೆ ಕುರಿತು ಚರ್ಚೆಗಳು ನಡೆಯಲಿವೆ. ಈ ಸಮ್ಮೇಳನದ ‘ದೆಹಲಿ ಘೋಷಣೆ 2025’ ನಗರ ಸಹಕಾರಿ ಬ್ಯಾಂಕುಗಳ ವಿಸ್ತರಣೆಗೆ ಒಂದು ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಮಿತ್ ಷಾ ಹೇಳಿದರು.

ಕೋ-ಆಪ್ ಕುಂಭ 2025ರ ಮೂಲಕ, ಪಟ್ಟಣ ಸಹಕಾರಿ ಬ್ಯಾಂಕುಗಳನ್ನು ವಿಸ್ತರಿಸುವ ನಮ್ಮ ಕನಸು ಶೀಘ್ರದಲ್ಲೇ ಈಡೇರಲಿದೆ ಎಂದು ಹೇಳಿದ ಅಮಿತ್ ಷಾ, ಇಂದು, ಸಹಕಾರಿ ಡಿಜಿ-ಪೇ ಮತ್ತು ಸಹಕಾರಿ ಡಿಜಿ-ಸಾಲವನ್ನು ಅಂಬ್ರೆಲ್ಲಾ ಎಂಬ ಸಂಸ್ಥೆಯು ಇಲ್ಲಿ ಪ್ರಾರಂಭಿಸಿದೆ ಎಂದರು.
ಸಹಕಾರ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಸಹಕಾರ ಸಚಿವಾಲಯವು ನಾಲ್ಕು ಗುರಿಗಳನ್ನು ನಿಗದಿಪಡಿಸಿದೆ ಎಂದು ತಿಳಿಸಿದ ಅಮಿತ್ ಷಾ, ಅವುಗಳನ್ನು ಈ ಸಮ್ಮೇಳನದಲ್ಲಿ ಬಿಚ್ಚಿಟ್ಟರು. ಮೊದಲನೆಯದು ಜನರೇಷನ್ ಸಹಕಾರ್‌ನ ಅಭಿವೃದ್ಧಿ, ಅಂದರೆ ಯುವ ಪೀಳಿಗೆಯನ್ನು ಸಹಕಾರಿ ಚಳುವಳಿಯೊಂದಿಗೆ ಸಂಪರ್ಕಿಸುವುದು. ಇದಕ್ಕಾಗಿ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ, ಇದು ಸಹಕಾರಿ ವಲಯದಲ್ಲಿನ ಪ್ರತಿಯೊಂದು ಅಗತ್ಯವನ್ನು ಪೂರೈಸುತ್ತದೆ ಎಂದರು. ಎರಡನೇಯದಾಗಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಸಮರ್ಥವಾಗಿರುವ ಸಹಕಾರಿ ಸಂಘಗಳನ್ನು ಸಿದ್ಧಪಡಿಸುವುದು. ಮೂರನೇಯದು, ಮುಂದಿನ ಐದು ವರ್ಷಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪ್ರತಿ ನಗರದಲ್ಲೂ ಒಂದು ನಗರ ಸಹಕಾರಿ ಬ್ಯಾಂಕ್ ಅನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಯುವ ಉದ್ಯಮಿಗಳು, ಸ್ವಸಹಾಯ ಗುಂಪುಗಳು ಮತ್ತು ಸಮಾಜದ ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ನಗರ ಸಹಕಾರಿ ಬ್ಯಾಂಕ್‌ಗಳು ಬಹು-ವಲಯ ವಿಧಾನದೊಂದಿಗೆ ತಮ್ಮ ಪ್ರಮುಖ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು. ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವುದು ನಮ್ಮ ಗುರಿಯಾಗಿದ್ದು, ಅದೇ ಸಮಯದಲ್ಲಿ, ದುರ್ಬಲ ವರ್ಗಗಳನ್ನು ಬಲಪಡಿಸುವುದು ಮತ್ತು ನಗರ ಸಹಕಾರಿ ಬ್ಯಾಂಕ್‌ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆಯು ಇದನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಗರ ಸಹಕಾರಿ ಬ್ಯಾಂಕ್‌ಗಳ ಮೂಲಕ ದುರ್ಬಲ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವುದು ನಮ್ಮ ಗುರಿಗಳಲ್ಲಿ ಒಂದಾಗಿರಬೇಕು ಎಂದು ಅಮಿತ್ ಷಾ ಹೇಳಿದರು.


