ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಶ್ಲಾಘನೆ
ಮಂಗಳೂರು: ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾಲಯವು ಅಡಕೆಯ ಮೇಲೆ ಸಂಶೋಧನಾಧಾರಿತ ಅಧ್ಯಯನ ನಡೆಸಿ ಸಲ್ಲಿಸಿದ ವರದಿಯನ್ನು ಅಡಕೆ ಬೆಳೆಗಾರರ ಹಿತರಕ್ಷಕ, ಬಹುರಾಜ್ಯ ಸಹಕಾರ ಸಂಸ್ಥೆ-ಕ್ಯಾಂಪ್ಕೊ ಸ್ವಾಗತಿಸಿದೆ. ಈ ಅಧ್ಯಯನದಲ್ಲಿ ಅಡಕೆ ಸಾರಗಳು ಶಕ್ತಿಶಾಲಿ ಕ್ಯಾನ್ಸರ್ ಪ್ರತಿಬಂಧಕ ಗುಣಗಳನ್ನು ಹೊಂದಿವೆ ಎಂಬ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಯೆನೆಪೋಯ ವಿಶ್ವವಿದ್ಯಾಲಯವು ಅಡಕೆ ಮೇಲಿನ ಈ ಮಹತ್ವದ ಅಧ್ಯಯನ ಕೈಗೊಂಡಿರುವುದನ್ನು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿಯವರು ಸ್ವಾಗತಿಸಿ ಶ್ಲಾಘಿಸಿದ್ದಾರೆ. ಅಧ್ಯಯನದ ಪ್ರಕಾರ, ಅಡಕೆಯ ಸಾರಗಳು ಕ್ಯಾನ್ಸರ್ ಕೋಶಗಳ ವೃದ್ಧಿ, ಚಲನೆ ಮತ್ತು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುತ್ತವೆ ಹಾಗೂ ಇದು ಸಾಮಾನ್ಯ ಕೋಶಗಳಿಗೆ ಹಾನಿಯುಂಟು ಮಾಡುವುದಿಲ್ಲ. ಈ ಮಹತ್ವದ ಫಲಿತಾಂಶವು, ಸಾಂಪ್ರದಾಯಕವಾಗಿ ಸಂಸ್ಕರಿಸಿದ ಅಡಕೆಯನ್ನು ಬಳಸಿದರೆ ಆರೋಗ್ಯದಾಯಕ ಲಾಭಗಳಿವೆ ಎಂಬ ಜನಸಾಮಾನ್ಯರ ನಂಬಿಕೆಗೆ ವೈಜ್ಞಾನಿಕ ಸಾಕ್ಷ್ಯಾಧಾರವನ್ನು ಒದಗಿಸಿದಂತಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ ಅಡಕೆಯನ್ನು ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿರುವುದು ಕಪೋಲಕಲ್ಪಿತ ಎಂಬ ಕ್ಯಾಂಪ್ಕೊದ ಪ್ರತಿಪಾದನೆಗೆ ಯೆನೆಪೋಯ ಸಂಸ್ತೆಯು ನಡೆಸಿದ ಈ ಅಧ್ಯಯನವು ಪ್ರಬಲವಾದ ಪುರಾವೆ ನೀಡಿದಂತಾಗಿದೆ. ಪ್ರತಿಷ್ಠಿತ ಸಂಸ್ಥೆಗಳ ಈ ರೀತಿಯ ಸಂಶೋಧನೆ ಆಧಾರಿತ ನಿರ್ಧಾರಗಳು ಅಡಕೆಯ ಕುರಿತು ಸಮತೋಲನದ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಪುಷ್ಟಿಕರಿಸಲು ಸಹಾಯ ಮಾಡುತ್ತವೆ.
ಈ ಹಿಂದೆ ನಿಟ್ಟೆ ವಿಶ್ವವಿದ್ಯಾಲಯ ಮತ್ತು ಇತರ ಹಲವಾರು ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆಗಳ ಅಧ್ಯಯನಗಳು ಕೂಡ ಅಡಕೆಯು ಕ್ಯಾನ್ಸರ್ ಕಾರಕವಲ್ಲ, ಬದಲಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ ಎಂಬುದನ್ನು ಸಾಬೀತು ಪಡಿಸಿವೆ. ಇದರಿಂದ ಬೆಳೆಗೆ ಇರುವ ಸಾಂಸ್ಕೃತಿಕ ಮತ್ತು ಪರಂಪರಾತ್ಮಕ ಮಹತ್ವವನ್ನು ರುಜುವಾತು ಆಗಿದೆ. ಈ ರೀತಿಯ ವೈಜ್ಞಾನಿಕ ದೃಢೀಕರಣಗಳು ಲಕ್ಷಾಂತರ ಅಡಕೆ ಬೆಳೆಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಉತ್ಪನ್ನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಕ್ಯಾಂಪ್ಕೊ ನಂಬಿದೆ. ಸಂಶೋಧನೆ ನಡೆಸಿರುವ ಯೆನೆಪೋಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಸಂಸ್ಥೆಯ ಆಡಳಿತಕ್ಕೆ ಕ್ಯಾಂಪ್ಕೊ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ಕ್ಯಾಂಪ್ಕೊ ಪ್ರಕಟಣೆಯಲ್ಲಿ ತಿಳಿಸಿದೆ.

