ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಪ್ರಾಯೋಜಕತ್ವದಲ್ಲಿ ದಾಸಸಾಹಿತ್ಯ ಸೇವಾ ಪ್ರತಿಷ್ಠಾನವು ಶನಿವಾರ ಸಂಜೆ ಮಂಗಳೂರಿನ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಆಯೋಜಿಸಿದ, ನಾಡಿನ ಹೆಸರಾಂತ ಕಂಚಿನ ಕಂಠದ ಗಾಯಕ ಪಂಡಿತ್ ಅನಂತ ಕುಲಕರ್ಣಿಯವರ ದಾಸವಾಣಿ [ಹರಿದಾಸರ ಕೃತಿ ಕೀರ್ತನೆಗಳ ಗಾಯನ] ಕಾರ್ಯಕ್ರಮ ಅದ್ಬುತವಾಗಿ ಮೂಡಿಬಂದು ಪ್ರೇಕ್ಷಕರ -ಶ್ರೋತೃಗಳ ಮನಸೂರೆಗೊಂಡಿತು. ಪುರಂದರದಾಸರು, ಕನಕದಾಸರು, ವಿಜಯದಾಸರು, ಪ್ರಸನ್ನ ವೆಂಕಟದಾಸರು ಮುಂತಾದ ಹರಿದಾಸರ ಕೃತಿಗಳನ್ನು ಸುಶ್ರಾವ್ಯವಾಗಿ, ಅದ್ಭುತವಾಗಿ ಹಾಡಿ, ಅವುಗಳ ರಚನೆಯ ಹಿನ್ನೆಲೆ ಹಾಗೂ ಅರ್ಥವನ್ನು ನೀಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
https://chat.whatsapp.com/JVAtKKe2M19AFO3W5629ZS?mode=ems_copy_t
ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಹಾಗೂ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಂ.ಎಸ್.ಗುರುರಾಜ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ದಾಸಸಾಹಿತ್ಯ ನಮ್ಮೆಲ್ಲರ ಬಹುದೊಡ್ಡ ಆಸ್ತಿ. ಭಕ್ತಿ ಮಾರ್ಗದ ಮೂಲಕ ಮೋಕ್ಷ ಪ್ರಾಪ್ತಿಯ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡುವ ದಾಸಸಾಹಿತ್ಯದ ತಿರುಳನ್ನು ಮನೆ -ಮನಗಳಿಗೆ ತಲುಪಿಸುವ ಉದ್ದೇಶದಿಂದ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಹಾಗೂ ಇಂತಹ ಕಾರ್ಯಗಳೂ ಒಳಗೊಂಡಂತೆ ಅನೇಕ ಸೇವಾಕಾರ್ಯಗಳನ್ನು ಕಾರ್ಯರೂಪಕ್ಕೆ ತರಲು ನೆರವಾಗಲೆಂದೇ ಶ್ರೀಶಾ ಸೌಹಾರ್ದ ಸೊಸೈಟಿಯನ್ನು ಆರಂಭಿಸಲಾಯಿತು. ಕಳೆದ ಆರು ವರ್ಷಗಳಿಂದ ಇವೆರೆಡೂ ಸಂಸ್ಥೆಗಳು ನೂರಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿಯವರು, ಭಕ್ತಿ ಮಾರ್ಗ ಮನುಷ್ಯನಿಗೆ ಸನ್ನಡತೆ, ಸಚ್ಚಾರಿತ್ರ್ಯವನ್ನು ಕಲಿಸುತ್ತದೆ. ಇದು ಮೋಕ್ಷ ಪ್ರಾಪ್ತಿಯ ಸರಳ ಮಾರ್ಗ. ರಾಮಕೃಷ್ಣ ಆಶ್ರಮಕ್ಕೆ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಹಾಗೂ ಶ್ರೀಶಾ ಸೌಹಾರ್ದ ಸೊಸೈಟಿಯು ಅನೇಕ ಸೇವಾ ಕಾರ್ಯಗಳ ಮೂಲಕ ಸಹಕಾರ ನೀಡುತ್ತಿದೆ. ಅವುಗಳ ಕಾರ್ಯತತ್ಪರತೆ ಮಾದರಿ ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್ ಪಾಲ್ಗೊಂಡಿದ್ದರು. ಶ್ರೀಶಾ ಸೌಹಾರ್ದ ಸೊಸೈಟಿ ಹಾಗೂ ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ವತಿಯಿಂದ ಗಾಯಕ ಪಂಡಿತ್ ಅನಂತ ಕುಲಕರ್ಣಿಯವರನ್ನು ಸನ್ಮಾನಿಸಲಾಯಿತು.
ಸಂಜನಾ ಭಟ್ ಅವರ ನಿರೂಪಣೆಯಲ್ಲಿ ಮೂಡಿಬಂದ ಕಾರ್ಯಕ್ರಮದಲ್ಲಿ ರಂಜನಾ ಹೆಗಡೆ ಪ್ರಾರ್ಥಿಸಿದರು. ಶ್ರೀಶಾ ಸೊಸೈಟಿಯ ನಿರ್ದೇಶಕ ಪ್ರಸನ್ನ ಕುಮಾರ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com





