ಜಿಲ್ಲೆಗೊಂದು ಪ್ರಶಸ್ತಿ ಕೊಡೋಣ: ಸಹಕಾರ ಸಪ್ತಾಹ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸಲಹೆ
ಸಹಕಾರ ಸಪ್ತಾಹದ ಘೋಷವಾಕ್ಯಗಳನ್ನು ಕೇಂದ್ರ ಸರ್ಕಾರ ಹೊರಡಿಸುವುದಕ್ಕೆ ಸಿಎಂ ಆಕ್ಷೇಪ
ಬೆಂಗಳೂರು: ಸಹಕಾರ ರತ್ನ ಪ್ರಶಸ್ತಿಗಳನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳ ಮಾದರಿಯಲ್ಲಿ ನೀಡುವುದು ಒಳ್ಳೆಯದಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದು ಜಿಲ್ಲೆಗೊಂದು ಸಹಕಾರ ರತ್ನ ನೀಡಿದರೆ ಹೇಗೆ ಎಂದು ಪರಿಶೀಲಿಸುವಂತೆ ಕೋರಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ಸಹಕಾರ ಸಪ್ತಾಹ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ದರಾಮಯ್ಯ, ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಸಹಕಾರ ಸಪ್ತಾಹ ಉದ್ಘಾಟನೆಯ ದಿನವೇ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡುವುದಕ್ಕೆ ಸಭೆ ಒಪ್ಪಿಗೆ ನೀಡಿ, ಪ್ರಶಸ್ತಿಗೆ ಆಯ್ಕೆ ಮಾಡುವ ಹೊಣೆಯನ್ನೂ ಸಿಎಂಗೆ ಒಪ್ಪಿಸಿತು. ಆದರೆ ಪ್ರಶಸ್ತಿಯನ್ನು ರಾಜ್ಯೋತ್ಸವ ಪ್ರಶಸ್ತಿ ಮಾದರಿಯಲ್ಲಿ ನೀಡಿದರೆ ಒಳ್ಳೆಯದಲ್ಲವೇ ಎಂದು ಕೇಳಿದ ಸಿಎಂ, ಮೊದಲೆಲ್ಲ ನೂರಾರು ರಾಜ್ಯೋತ್ಸವ ಪ್ರಶಸ್ತಿಗಳನ್ನು ಕೊಡಲಾಗುತ್ತಿತ್ತು. ಈಗ ಎಷ್ಟನೇ ವರ್ಷದ ಆಚರಣೆಯೋ, ಅಷ್ಟೇ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಅಥವಾ ಜಿಲ್ಲೆಗೆ ಒಂದು, ಬೆಂಗಳೂರಿಗೆ ಅಗತ್ಯವಿದ್ದರೆ ಎರಡರಿಂದ ಐದು ಪ್ರಶಸ್ತಿಗಳನ್ನು ನೀಡಬಹುದು. ಈ ಬಗ್ಗೆ ಸಮಿತಿಯ ತೀರ್ಮಾನದಂತೆ ಸಹಕಾರ ರತ್ನ ಪ್ರಶಸ್ತಿ ನೀಡಿ ಎಂದು ಸಲಹೆ ನೀಡಿದರು.



ಸಭೆಯಲ್ಲಿ ಸಚಿವರಾದ ಎಚ್.ಕೆ.ಪಾಟೀಲ, ಶಿವಾನಂದ ಪಾಟೀಲ, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ, ಸಹಕಾರ ವಸತಿ ಮಹಾಮಂಡಳದ ಅಧ್ಯಕ್ಷ ಎಸ್.ಟಿ.ಸೋಮಶೇಖರ್, ಮಾಜಿ ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ವೆಂಕಟೇಶ್, ರಾಘವೇಂದ್ರ ಹಿಟ್ನಾಳ್, ಮಹಾಮಂಡಳದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಹಕಾರ ಕ್ಷೇತ್ರ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆಯೇ ಹೊರತು ಕೇಂದ್ರದ ವ್ಯಾಪ್ತಿಗೆ ಬರುವುದಿಲ್ಲ. ಸಹಕಾರ ಸಪ್ತಾಹದ ಘೋಷವಾಕ್ಯಗಳನ್ನು ಕೇಂದ್ರ ಸರ್ಕಾರವಲ್ಲ, ರಾಜ್ಯ ಸರ್ಕಾರಗಳು ಘೋಷಿಸಬೇಕು ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಆಕ್ಷೇಪವನ್ನೂ ವ್ಯಕ್ತಪಡಿಸಿದರು.
ಸಿಎಂಗೆ ಮನವಿ: ಬ್ಯಾಂಕಿಂಗ್ ವ್ಯವಸ್ಥೆ ನಿಯಂತ್ರಣ ಕಾಯ್ದೆ ಪ್ರಕಾರ ಸಹಕಾರಿ ಬ್ಯಾಂಕ್‌ಗಳ ಮ್ಯಾನೇಜರ್‌ಗಳ ಸೇವಾವಧಿಯನ್ನು ಮರು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಸಿಎಂಗೆ ಸಭೆಯಲ್ಲಿ ಮನವಿ ಮಾಡಲಾಯಿತು.
72ನೇ ಸಹಕಾರ ಸಪ್ತಾಹದ ಉದ್ಘಾಟನೆ ನ.14ರಂದು ‘ಕಾರ್ಯದಕ್ಷತೆ, ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಹೆಚ್ಚಿಸಲು ಡಿಜಿಟಲೀಕರಣವನ್ನು ಪ್ರೋತ್ಸಾಹಿಸುವುದು’ ಎಂಬ ಶೀರ್ಷಿಕೆಯಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಉದ್ಘಾಟನೆ ಹಾಗೂ ಸಮಾರೋಪದಲ್ಲಿ ಸಿಎಂ ಭಾಗವಹಿಸಲಿದ್ದಾರೆ.
ಸಪ್ತಾಹದ ವಿವರಗಳು:
‘ತ್ರಿಭುವನ್ ಸಹಕಾರ ವಿಶ್ವವಿದ್ಯಾಲಯ: ಸಂಶೋಧನೆ ಮತ್ತು ತರಬೇತಿಯಿಂದ ಸಹಕಾರ ಶಿಕ್ಷಣದಲ್ಲಿ ಪರಿವರ್ತನೆ’, ನ.15ರಂದು ರಾಯಚೂರು.
‘ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣಾಭಿವೃದ್ಧಿಯ ಬಲವರ್ಧನೆ’, ನ.16ರಂದು ಮಂಗಳೂರು.
‘ರಾಷ್ಟ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ: ಭಾರತದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ’ ನ.17ರಂದು ಹಾವೇರಿ.
‘ಸಹಕಾರಿ ಉದ್ಯಮಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಬಲ ವರ್ಗದ ಸಬಲೀಕರಣ (ಕರಕುಶಲ, ಕೈಮಗ್ಗ, ಕಾರ್ಮಿಕ, ಮೀನುಗಾರಿಕೆ ಇತ್ಯಾದಿ)’ ನ.18ರಂದು ಹೊಸಪೇಟೆ.
‘ಪ್ರವಾಸೋದ್ಯಮ, ಆರೋಗ್ಯ, ಹಸಿರು ಇಂಧನ, ಪ್ಲಾಟ್ ಫಾರಂ ಸಹಕಾರಿ ಸಂಸ್ಥೆಗಳು, ಕಿಚನ್ ಸಹಕಾರ ಸಂಘಗಳು ಮತ್ತಿತರ ಉದಯೋನ್ಮುಖ ಸಹಕಾರಗಳ ಸಂಘಗಳನ್ನು ಅನುಕೂಲಕರ ಪ್ರದೇಶಗಳಿಗೆ ವಿಸ್ತರಣೆ’ ನ. 19ರಂದು ಕೊಪ್ಪಳ.
‘ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವನಾವೀನ್ಯತೆಯ ಸಹಕಾರ ವ್ಯವಹಾರದ ಮಾದರಿಗಳು’ ನ. 20ರಂದು ಚಾಮರಾಜನಗರ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com







