ವಿಶ್ವಕರ್ಮ ಸಹಕಾರ ಬ್ಯಾಂಕ್‌ನಲ್ಲಿ ನಮ್ಮ ಬ್ಯಾಂಕ್ ದಿನಾಚರಣೆಯಲ್ಲಿ ವಿದ್ವಾನ್ ಎನ್.ದಾಮೋದರ ಶರ್ಮ ವಿಶ್ಲೇಷಣೆ
ಮಂಗಳೂರು: ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅವಗುಣಗಳು ಹೇಗೆ ಇರುತ್ತವೆಯೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಧನಾತ್ಮಕ ಸಂಗತಿಗಳಿಂದ ಕೂಡಿದ ಉತ್ತಮ ಗುಣಗಳು ಕೂಡ ಇರುತ್ತವೆ. ನಾವು ಅವಗುಣಗಳ ಬಗ್ಗೆ ಮಾತನಾಡದೇ ಅವರ ಒಳ್ಳೆಯ ಗುಣಗಳನ್ನು ಗುರುತಿಸಿ ಅನುಸರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದರಿಂದ ನಾವು ಕೆಲಸ ನಿರ್ವಹಿಸುವ ಪರಿಸರವನ್ನು ಆರೋಗ್ಯಪೂರ್ಣವಾಗಿಸಲು ಸಾಧ್ಯ. ಆದುದರಿಂದ ಧನಾತ್ಮಕ ಚಿಂತನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ವಾಗ್ಮಿ ಎನ್.ದಾಮೋದರ ಶರ್ಮ ಅಭಿಪ್ರಾಯಪಟ್ಟರು.
https://chat.whatsapp.com/JVAtKKe2M19AFO3W5629ZS?mode=ems_copy_t
ವಿಶ್ವಕರ್ಮ ಸಹಕಾರ ಬ್ಯಾಂಕಿನಲ್ಲಿ ಭಾನುವಾರ ನಮ್ಮ ಬ್ಯಾಂಕ್ ದಿನಾಚರಣೆ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದರು. ಯಾವುದೇ ಸಂಸ್ಥೆಯ ಬೆಳವಣಿಗೆಯಲ್ಲಿ ಸಿಬ್ಬಂದಿಗಳ ಪಾತ್ರ ಅತ್ಯಂತ ಗುರುತರವಾದುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಕಲಿಕೆ ಮತ್ತು ಅಧ್ಯಯನದ ಮೂಲಕ ನಮ್ಮ ಸಾಮರ್ಥ್ಯವನ್ನು ಸಕಾಲಿಕವಾಗಿ ಬೆಳೆಸಿಕೊಳ್ಳುವುದು ಹಾಗೂ ಅದನ್ನು ಪ್ರಸ್ತುತತೆಗೆ ಅನುಗುಣವಾಗಿ ಬಳಸಿಕೊಳ್ಳುವ ಕಾರ್ಯ ಮಾಡಬೇಕು. ಆಗ ಸಾಂಸ್ಥಿಕ ಬೆಳವಣಿಗೆ ಹೇಗೆ ಸಾಧ್ಯವಾಗತ್ತದೋ ಹಾಗೆಯೇ ಸಿಬ್ಬಂದಿಗಳ ಬೆಳವಣಿಗೆಯೂ ಅಗುತ್ತದೆ ಎಂದು ಹೇಳಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಸ್ ಆರ್ ಹರೀಶ್ ಆಚಾರ್ಯ ಮಾತನಾಡಿ, ಸಹಕಾರ ಕ್ಷೇತ್ರ ಬೇರೆಲ್ಲ ಕ್ಷೇತ್ರಗಳಿಂದಲೂ ಭಿನ್ನವಾಗಿರುವ ಕ್ಷೇತ್ರ. ಇಲ್ಲಿ ಯಾವುದೇ ಆಡಳಿತ ಮಂಡಳಿಯ ಪದಾವಧಿಯು ನಿಯಮಾನುಸಾರ ಕೇವಲ ಐದು ವರ್ಷ ಮಾತ್ರ. ಆದರೆ ಸಿಬ್ಬಂದಿಗಳ ಅವಧಿಯು ಮೂವತ್ತರಿಂದ ಮೂವತ್ತೈದು ವರ್ಷಗಳು. ಅಂದರೆ ಇಡೀ ಜೀವಿತಾವಧಿಯೇ ಆಗುತ್ತದೆ. ಆದುದರಿಂದ ಸಹಕಾರ ಸಂಸ್ಥೆಯ ಸಿಬ್ಬಂದಿಗಳು ಸಂಸ್ಥೆಯ ನೀತಿ ನಿರೂಪಣೆಯಲ್ಲಿ ಅಗತ್ಯ ಪಾತ್ರ ನಿರ್ವಹಿಸುವ ಕಾರ್ಯ ನಿರ್ವಹಿಸಬೇಕಾಗಿದೆ. ಹಾಗಾಗಿ ಸಂಸ್ಥೆಯ ಪ್ರತಿಯೊಂದು ಆಗುಹೋಗುಗಳ ಬಗ್ಗೆ ಅರಿವು ಪಡೆದುಕೊಂಡು, ಅದಕ್ಕೆ ಪೂರಕವಾಗಿ ಜಾಗೃತಾವಸ್ಥೆಯಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಇದು ಯಾವತ್ತು ಕೂಡಾ ಏಕವ್ಯಕ್ತಿ ಕೇಂದ್ರಿತವಾಗಿ ನಡೆಯುವುದು ಸಾಧ್ಯವಿಲ್ಲ. ಸಾಮೂಹಿಕತೆಯಿಂದ ಮಾತ್ರ ಸಾಧ್ಯ. ಆದುದರಿಂದ ಪ್ರತಿಯೊಬ್ಬರೂ ಕೂಡ ವ್ಯವಸ್ಥೆಗೆ ಪೂರಕ. ಅವರನ್ನು ವ್ಯವಸ್ಥೆಯ ಉತ್ಪಾದಕರನ್ನಾಗಿ ಪರಿವರ್ತಿಸಿ ಬಳಸಿಕೊಂಡು ಸಾಮೂಹಿಕತೆಯನ್ನು ಬಲಪಡಿಸಬೇಕಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ವೈಯಕ್ತಿಕ ಬದುಕು ಮತ್ತು ಕಚೇರಿಯ ಸೇವೆ ಹಾಗೂ ಕಾರ್ಯ ಪ್ರತ್ಯೇಕ ಅಲ್ಲ. ಅವು ಒಂದಕ್ಕೊಂದು ಪೂರಕವಾದಾದುದು. ಹಾಗಾಗಿ ಸಿಬ್ಬಂದಿಗಳು ಬ್ಯಾಂಕಿನ ಕರ್ತವ್ಯ ಮತ್ತು ಸೇವಾ ನಿರ್ವಹಣೆಯ ಕಾರ್ಯ ಹಾಗೂ ವೈಯಕ್ತಿಕ ಕಾರ್ಯಗಳಿಗೆ ಸಮಾನ ಪ್ರಾತಿನಿಧ್ಯ ನೀಡಿ ಜವಾಬ್ಧಾರಿ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಸು ಫ್ರಮ್ ಸೋ ಸಿನಿಮಾದ ಕೊರಿಯೋಗ್ರಾಫರ್ ವಿನಾಯಕ ಆಚಾರ್ಯ ಮುಖ್ಯ ಅತಿಥಿಯಾಗಿದ್ದರು. ಬ್ಯಾಂಕಿನ ಉಪಾಧ್ಯಕ್ಷರಾದ ಪಿ.ಜಗದೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬ್ಯಾಂಕಿನ ನಿರ್ದೇಶಕರಾದ ಡಿ.ಭಾಸ್ಕರ ಆಚಾರ್ಯ, ಬಿ.ಗುರುಪ್ರಸಾದ್ ಶೆಟ್ಟಿ, ಹರಿಪ್ರಸಾದ್, ಭರತ್ ನಿಡ್ಪಳ್ಳಿ, ಜಯಶ್ರೀ ವಿ.ಆಚಾರ್ಯ, ರೇಷ್ಮಾ ಚಂದನ್, ಶ್ರುತಿ ಕೆ.ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ವಸಂತ ಅಡ್ಯಂತಾಯ ವಂದಿಸಿದರು. ಸಿಬ್ಬಂದಿ ಅಮೃತೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com












