ವಿಶೇಷ ತರಬೇತಿ ಶಿಬಿರದಲ್ಲಿ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಭಿಪ್ರಾಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ನಿಂದ ಬೇರೆ ಬೇರೆ ವಿಷಯದಲ್ಲಿ ತರಬೇತಿಗಳನ್ನು ನಡೆಸಲಾಗುತ್ತಿದೆ. ತರಬೇತಿ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಕಾಲಕಾಲಕ್ಕೆ ಆಗುವ ತಿದ್ದುಪಡಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗುತ್ತದೆ ಎಂದು ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅಭಿಪ್ರಾಯಪಟ್ಟರು.
https://chat.whatsapp.com/JVAtKKe2M19AFO3W5629ZS?mode=ems_copy_t
ದ.ಕ. ಸಹಕಾರಿ ಹಾಲು ಒಕ್ಕೂಟದ ಡಾ.ವರ್ಗೀಸ್ ಕುರಿಯನ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್, ದ.ಕ. ಹಾಲು ಒಕ್ಕೂಟ ನಿಯಮಿತ ಮಂಗಳೂರು ಹಾಗೂ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಹಾಗೂ ಮೂಡುಬಿದರೆ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನಡೆದ ವಿಶೇಷ ತರಬೇತಿ ಶಿಬಿರದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ಕ್ಷೀರ ಕ್ರಾಂತಿಯಲ್ಲಿ ಹೈನುಗಾರರ ಪಾತ್ರ ಮಹತ್ವದ್ದಾಗಿದೆ. ರಾಸುಗಳ ಖರೀದಿಗೆ ಒಂದು ಎಕರೆ ಇರುವವರಿಗೂ ರೂ. ೩ ಲಕ್ಷದವರೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಹೈನುಗಾರ ಸದಸ್ಯರಿಗೆ ತಿಳಿಯಪಡಿಸಬೇಕು. ಕಳೆದ ಆರು ತಿಂಗಳಿಂದ ದ.ಕ. ಸಹಕಾರಿ ಹಾಲು ಒಕ್ಕೂಟವು ೨೫ ಸಾವಿರ ಲೀಟರ್‌ನಿಂದ ೭೫ ಸಾವಿರ ಲೀಟರ್‌ಗೆ ಹಾಲಿನ ಉತ್ಪಾದನೆ ಹೆಚ್ಚು ಮಾಡಿದ್ದು, ಇದಕ್ಕೆ ಹೈನುಗಾರರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರಣವಾಗಿವೆ ಎಂದು ಅಭಿನಂದನೆ ಸಲ್ಲಿಸಿದರು.
ತರಬೇತಿ ಉದ್ಘಾಟಿಸಿ ಮಾತನಾಡಿದ ದ.ಕ. ಸಹಕಾರಿ ಹಾಲು ಒಕ್ಕೂಟದ ಮಾನ್ಯ ಅಧ್ಯಕ್ಷರಾದ ಕೆ.ರವಿರಾಜ್ ಹೆಗ್ಡೆ ಮಾತನಾಡಿ ಸಹಕಾರ ಕಾಯ್ದೆ ತಿಳುವಳಿಕೆ ಕೊರತೆ ಇದ್ದರೆ ಸಹಕಾರ ಸಂಘಗಳನ್ನು ನಡೆಸುವುದು ಕಷ್ಟಕರವಾಗುತ್ತದೆ. ಆದುದರಿಂದ ಸಹಕಾರ ಕಾಯ್ದೆ, ಬೈಲಾ ಈ ಎರಡನ್ನೂ ತಿಳಿದುಕೊಂಡರೆ, ಯಾವುದೇ ರೀತಿಯ ಅಡ್ಡಿ ಆತಂಕಗಳು ಬರದೇ ಉತ್ತಮ ರೀತಿಯಲ್ಲಿ ಸಹಕಾರ ಸಂಘಗಳನ್ನು ಮುನ್ನಡೆಸಬಹುದು ಎಂದರು.


ದ.ಕ. ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಸುಚರಿತ ಶೆಟ್ಟಿ, ಸವಿತಾ ಎನ್.ಶೆಟ್ಟಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಸುಧಾಕರ ಶೆಟ್ಟಿ, ಜೋಯ್ಲಸ್ ವಿಲ್ಫ್ರೆಡ್ ಡಿಸೋಜ, ಸಾವಿತ್ರಿ ರೈ, ದ.ಕ. ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ್ ಡಿ, ವ್ಯವಸ್ಥಾಪಕರಾದ ರವಿರಾಜ ಉಡುಪ ಉಪಸ್ಥಿತರಿದ್ಧರು. ಸಭಾ ಕಾರ್ಯಕ್ರಮದ ಬಳಿಕ ತರಬೇತಿ ಶಿಬಿರದಲ್ಲಿ ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ.ಚಂದ್ರಶೇಖರ್ ಭಟ್ ಹಾಲಿನ ಗುಣಮಟ್ಟ, ರಾಸುಗಳ ನಿರ್ವಹಣೆ ಮತ್ತು ಒಕ್ಕೂಟದ ಯೋಜನೆಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ದ.ಕ ಸಹಕಾರಿ ಹಾಲು ಒಕ್ಕೂಟದ ನಿವೃತ್ತ ಸಹಾಯಕ ವ್ಯವಸ್ಥಾಪಕ ಕೆ.ಸುಬ್ಬರಾವ್ ಲೆಕ್ಕಪತ್ರಗಳ ನಿರ್ವಹಣೆ, ಸಂಘದಲ್ಲಿ ಇರಬೇಕಾದ ಪ್ರಮುಖ ದಾಖಲೆ ಪುಸ್ತಕಗಳು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ದ.ಕ ಜಿಲ್ಲಾ ಸಹಕಾರಿ ಯೂನಿಯನ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ ಸ್ವಾಗತಿಸಿ, ವಂದಿಸಿದರು.





