30 ಲಕ್ಷ ರೂ.ಗೂ ಅಧಿಕ ಲಾಭ; ಅಧ್ಯಕ್ಷ ಗಣೇಶ್ ಶೆಣೈ ಮಾಹಿತಿ
ಮಂಗಳೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಉದಾತ್ತ ಧ್ಯೇಯದೊಂದಿಗೆ ಸ್ಥಾಪನೆಯಾದ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು, 300 ಕೋಟಿ ರೂ. ಅಧಿಕ ವ್ಯವಹಾರ ದಾಖಲಿಸುವ ಮುಖೇನ ಅಪೂರ್ವ ಸಾಧನೆ ಮಾಡಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ 30 ಲಕ್ಷ ರೂ.ಗೂ ಮೀರಿ ಲಾಭ ಗಳಿಸಿದ್ದು, ಸದಸ್ಯರಿಗೆ ಈ ಬಾರಿ ಶೇ.11 ಡಿವಿಡೆಂಡ್ ನೀಡಲಿದೆ ಎಂದು ಶ್ರೀ ಪೂರ್ಣಾನಂದ ಸಹಕಾರಿ ಸಂಘದ ಅಧ್ಯಕ್ಷರಾದ ಗಣೇಶ್ ಶೆಣೈ ಘೋಷಿಸಿದರು.
https://chat.whatsapp.com/EbVKVnWB6rlHT1mWtsgbch
ಭಾನುವಾರ ನಡೆದ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣೇಶ್ ಶೆಣೈ ಅವರು, ನಮ್ಮ ಸಂಸ್ಥೆಯು 70 ಲಕ್ಷ ರೂ. ಶೇರು ಬಂಡವಾಳ, 35 ಕೋಟಿ ರೂ. ಠೇವಣಿಗಳು ಇದ್ದು, 28 ಕೋಟಿ ರೂ. ಸಾಲ ನೀಡಲಾಗಿದೆ. ಏಳು ಕೋಟಿ ರೂ. ವಿನಿಯೋಗಗಳು, 37 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಶ್ರೀ ಪೂರ್ಣಾನಂದ ಪ್ರೊಡಕ್ಟ್ ವ್ಯಾಪಾರ ಒಳಗೊಂಡಂತೆ 300 ಕೋಟಿ ರೂ. ಮೀರಿ ವ್ಯವಹಾರ ದಾಖಲಿಸಿದೆ ಎಂದು ಅಂಕಿಅಂಶ ನೀಡಿದರು. ದೇಶ, ವಿದೇಶಗಳಲ್ಲಿರುವ ಸಂಸ್ಥೆ ಸದಸ್ಯರು ಗೂಗಲ್ ಪೇ ಮುಖೇನ ನಿರಖು ಠೇವಣಿ, ಶೇರುಗಳನ್ನು ಪಡೆಯುವ ಮೂಲಕ ಸಂಸ್ಥೆಯನ್ನು ಆರ್ಥಿಕವಾಗಿ ಬೆಂಬಲಿಸುತ್ತಿರುವುದು ನಂಬಿಕೆ, ಪ್ರೀತಿ ವಿಶ್ವಾಸಗಳ ಪ್ರತೀಕ ಎಂದರು.

ಕಶೆಕೋಡಿ ಶ್ರೀಲಕ್ಷ್ಮೀ ವೆಂಕಟ್ರಮಣ ದೇಗುಲದ ಆಡಳಿತ ಮೊಕ್ತೇಸರರಾಗಿ ಆಯ್ಕೆಯಾಗಿರುವ ಸುಧಾಕರ ಶೆಣೈಯವರು ದೀಪ ಪ್ರಜ್ವಲನಗೈದು ಮಹಾಸಭೆ ಉದ್ಘಾಟಿಸಿದರು. ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ಸೌಹಾರ್ದ, ಸಾಮರಸ್ಯ ಹಾಗೂ ಕೃತಜ್ಞತೆಗಳು ಬದುಕಿನಲ್ಲಿ ಬಹಳ ಮುಖ್ಯವೆಂಬ ಅಮೂಲ್ಯ ಪಾಠವನ್ನು ಸಹಕಾರಿ ಸಂಸ್ಥೆಗಳು ಬೋಧಿಸುತ್ತಿರುವುದು ಸ್ತುತ್ಯರ್ಹ. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಅಪಾರವೆಂಬ ಸಿದ್ಧಾಂತದೊಂದಿಗೆ ದುಡಿಯಬೇಕು. ಈ ದೇಶದ ಪ್ರಧಾನ ಆಸ್ತಿಯಾಗಿರುವ ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ಇಂದಿನ ಪೈಪೋಟಿ ಯುಗದಲ್ಲಿ ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳ ಜತೆ ಪೈಪೋಟಿ ನಡೆಸಲು ಸಹಕಾರಿ ಸಂಸ್ಥೆಗಳಿಗೆ ಪ್ರತ್ಯೇಕ ವಿಶಿಷ್ಟತೆಗಳಿರಬೇಕು ಮತ್ತು ಈ ತರದ ವಿಶಿಷ್ಟತೆ ಶ್ರೀ ಪೂರ್ಣಾನಂದ ಸಂಸ್ಥೆಗಿದೆ ಎಂದು ಪ್ರಶಂಸಿಸಿದರು.

ಸಂಸ್ಕಾರ ಅತ್ಯುತ್ತಮ
ಶ್ರೀ ಪೂರ್ಣಾನಂದ ಸಹಕಾರಿಯ ಹಿರಿಯ ಸದಸ್ಯರಾದ ಸಂಜೀವ ಪಾಟೀಲ್ ಕುಡುಪು, ರಾಮಚಂದ್ರ ಸಾಮಂತ್ ಕಾರವಾರ, ಕೇಶವ ಭಟ್, ಎಂ.ಸಿ.ಉಳ್ಳಾಲ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಸುಧಾಕರ ಶೆಣೈ ಅವರನ್ನೂ ಗೌರವಿಸಲಾಯಿತು. ಶ್ರೀ ಪೂರ್ಣಾನಂದ ಸಂಸ್ಥೆಯ ಅಧ್ಯಕ್ಷ ನಿರ್ದೇಶಕರ ಸಹಿತ ಸಿಬ್ಬಂದಿಗಳೆಲ್ಲರ ಸಂಪರ್ಕಶೀಲತೆ, ಸಂವಹನ ಸಂಸ್ಕಾರಗಳು ಅತ್ಯುತ್ತಮ. ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ಉಜ್ವಲ ಭವಿಷ್ಯವಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿ ಮಾತನಾಡಿದ ಕೇಶವ ಭಟ್ ಹೇಳಿದರು. ವರ್ಷದಿಂದ ವರ್ಷ ಪ್ರಗತಿಯ ಹಾದಿಯಲ್ಲಿ ದಾಪುಗಾಲಿಕ್ಕುತ್ತಿರುವ ಶ್ರೀ ಪೂರ್ಣಾನಂದ ಸಂಸ್ಥೆ ಮುಂದೊಂದು ದಿನ ಬ್ಯಾಂಕ್ ಆಗಿ ಕಂಗೊಳಿಸಬೇಕೆಂದು ಹಿರಿಯ ಸದಸ್ಯ ರಾಮಚಂದ್ರ ಸಾಮಂತ್ ಆಶಯ ವ್ಯಕ್ತಪಡಿಸಿದರು.

ಪ್ರತಿಭೆಗಳಿಗೆ ಪುರಸ್ಕಾರ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಸಹಿತ ಅತ್ಯಧಿಕ ಅಂಕ ಪಡೆದ ಹಲವು ಪ್ರತಿಭೆಗಳು, ಕ್ರೀಡಾರಂಗ ಮತ್ತು ಚಿತ್ರಕಲಾ ರಂಗದಲ್ಲಿ ಮಿಂಚಿದ ಮಕ್ಕಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ನಿರ್ದೇಶಕಿ ಗೀತಾ ರತ್ನಾಕರ್ ಪ್ರತಿಭೆಗಳ ಯಾದಿಯನ್ನು ಓದಿದರು. ಶೇರುಗಳ ಮೌಲ್ಯವರ್ಧನೆ, ಅನ್ಯಾನ್ಯ ಸಾಲ ಯೋಜನೆಗಳು ಮತ್ತಿತರ ವಿಚಾರವಾಗಿ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು. ಶ್ರೀ ಪೂರ್ಣಾನಂದ ಸಹಕಾರಿಯ ಉಪಾಧ್ಯಕ್ಷ ಉಪೇಂದ್ರ ನಾಯಕ್, ನಿರ್ದೇಶಕರಾದ ಕೆ.ಮೋಹನ್ ನಾಯಕ್, ಜಗದೀಶ ಶೆಣೈ, ರವೀಂದ್ರ ಪ್ರಭು, ಸದಾನಂದ ಪ್ರಭು, ಅರವಿಂದ ಕುಮಾರ್ ಶೆಟ್ಟಿ, ಪ್ರಧಾನ ವ್ಯವಸ್ಥಾಪಕಿ ಅನಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಡಿ.ವಿಶ್ವನಾಥ್ ಕೆ. ಸಹಿತ ಅಗಲಿದ ಸದಸ್ಯರಿಗೆ ನುಡಿನಮನ ಸಲ್ಲಿಸಲಾಯಿತು. ಆರಂಭದಲ್ಲಿ ಸಂಸ್ಥೆಯ ಮಾರಾಟ ಅಧಿಕಾರಿ ಬಿ.ಉಪೇಂದ್ರಕುಮಾರ್ ಗಣಪತಿ ಸ್ತುತಿ ಮಾಡಿದರು. ಸಿಬ್ಬಂದಿ ಸುಜಾತ ಮತ್ತು ಉಷಾ ಸಹಕಾರಿ ಗೀತೆ ಹಾಡಿದರು. ಅಧ್ಯಕ್ಷ ಗಣೇಶ್ ಶೆಣೈ ಸ್ವಾಗತಿಸಿ ಪ್ರಸ್ತಾವಿಸಿದರು. ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಹೃಷಿಕೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಹರಿಶ್ಚಂದ್ರ ಪ್ರಭು ವಂದಿಸಿದರು.

