ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ಜಿಲ್ಲಾಮಟ್ಟದಲ್ಲಿ ಗರಿಷ್ಠ ಸಾಧನೆ : ಅಧ್ಯಕ್ಷರಾದ ಪ್ರಭಾಕರ ಪ್ರಭು ಮಾಹಿತಿ
ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಒಟ್ಟು ರೂ. 545.04 ಕೋಟಿ ವ್ಯವಹಾರ ನಡೆಸಿದ್ದು, ರೂ.1,93,06,792.15 ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ.
ಶನಿವಾರ ಸಂಘದ ಪ್ರಧಾನ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣ ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು 1947ರಲ್ಲಿ ಆಗಿನ ಸಹಕಾರಿ ಬಂಧುಗಳ ನೆರವಿನಿಂದ ಬಿ.ಕೃಷ್ಣ ರೈ ಯವರ ಅಧ್ಯಕ್ಷತೆಯಲ್ಲಿ ಸ್ಥಾಪನೆಗೊಂಡು, ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮ ಸೇರಿದಂತೆ ಬಂಟ್ವಾಳ ತಾಲೂಕಿನ ಏಳು ಗ್ರಾಮಗಳೊಂದಿಗೆ ಒಟ್ಟಾರೆ ಎಂಟು ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದ್ದು ,ಆಡಳಿತ ಮಂಡಳಿಯ ನಿರ್ದೇಶಕರ, ಸಿಬ್ಬಂದಿಗಳ ಹಾಗೂ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ತೃಪ್ತಿಕರ ಸೇವೆ ನೀಡುತ್ತಾ ಬಂದಿದ್ದು,ಕಳೆದ 78 ವರ್ಷಗಳಿಂದ ಅಭಿವೃದ್ದಿಯಲ್ಲಿ ಮುನ್ನಡೆಯುತ್ತಿದೆ. 2024-25ನೇ ವರ್ಷದಲ್ಲಿ ವಿವಿಧ ಉದ್ದೇಶಗಳಿಗೆ ಒಟ್ಟು ರೂ. 122.33 ಕೋಟಿ ಸಾಲ ವಿತರಿಸಲಾಗಿದ್ದು, ಹೊರ ಬಾಕಿ ಸಾಲವು ರೂ.112.32 ಕೋಟಿ ಆಗಿದ್ದು, ವಿತರಿಸಿದ ಸಾಲದಲ್ಲಿ ಶೇ.97ರಷ್ಟು ವಸೂಲಾಗಿರುತ್ತದೆ. 2024-25ನೇ ಸಾಲಿನ ವರ್ಷಾಂತ್ಯಕ್ಕೆ ರೂ. 62.19 ಕೋಟಿ ಠೇವಣಿ ಹೊಂದಿದ್ದು, ಸಂಘವು ಕಳೆದ ಹಲವಾರು ವರ್ಷಗಳಿಂದ ಆಡಿಟ್ ವರದಿಯಲ್ಲಿ ಎ ಗ್ರೇಡ್ ಕಾಯ್ದುಕೊಂಡು ಬಂದಿದೆ ಎಂದು ಹೇಳಿದರು.
https://chat.whatsapp.com/EbVKVnWB6rlHT1mWtsgbch
2024-25ನೇ ಸಾಲಿನಲ್ಲಿ 1771 ರೈತರು 2037 ಎಕರೆ ಜಮೀನಿಗೆ ಸಂಬಂಧಿಸಿ ರೂ. 52.74 ಲಕ್ಷ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ಸಂಬಂಧಿಸಿ ರೈತರಿಂದ ಪ್ರೀಮಿಯಂ ಪಾವತಿಸಲಾಗಿದೆ. ಕಳೆದ ವರ್ಷ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ ಸದಸ್ಯರು ಸುಮಾರು 5-6 ಕೋಟಿ ಬೆಳೆವಿಮೆ ಪರಿಹಾರ ಪಡೆದಿದ್ದಾರೆ. ಇದರಿಂದ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಬೆರಳೆಣಿಕೆಯ ಸಹಕಾರಿ ಸಂಘಗಳಲ್ಲಿ ಒಂದಾಗಿ ಗುರತಿಸಿಕೊಂಡಿದೆ ಎಂದು ಪ್ರಭಾಕರ ಪ್ರಭು ತಿಳಿಸಿದರು.

ಪ್ರತಿಭಾ ಪುರಸ್ಕಾರ:
ಸಂಘದ ಸದಸ್ಯರ ಪ್ರತಿಭಾನ್ವಿತ ಎಸ್ಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದವರನ್ನು ಗೌರವಿಸಲಾಗುತ್ತದೆ. ಸ್ಥಳೀಯ ರೋಟರಿ ಕ್ಲಬ್ ಸಹಯೋಗದಲ್ಲಿ ಸಂಘದ ವತಿಯಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿ ನೀಡಲಾಗಿದೆ ಎಂದು ಪ್ರಭಾಕರ ಪ್ರಭು ಮಾಹಿತಿ ನೀಡಿದರು.
ರೈತ ಕಲ್ಯಾಣ ನಿಧಿ ಯೋಜನೆ:
ಸಂಘದಿಂದ ಬೆಳೆ ಸಾಲ ಪಡೆದ ಸದಸ್ಯರು ಮರಣ ಹೊಂದಿದ್ದಲ್ಲಿ, ಅವರ ಕುಟುಂಬಕ್ಕೆ ಸಂಘದ ವತಿಯಿಂದ ನೆರವಾಗುವ ದೃಷ್ಟಿಯಿಂದ ರೈತ ಕಲ್ಯಾಣ ನಿಧಿ ಯೋಜನೆಯ ಮೂಲಕ ರೂ.10000ದಂತೆ 24 ಮಂದಿಗೆ ಆರ್ಥಿಕವಾಗಿ ಸಹಕಾರ ನೀಡಲಾಗಿದೆ.



ನ್ಯಾಯಬೆಲೆ ಅಂಗಡಿ:
ನ್ಯಾಯಬೆಲೆ ಅಂಗಡಿಯ ಮೂಲಕ ಸಂಘದಲ್ಲಿ ಪಡಿತರ ಸಾಮಗ್ರಿಗಳನ್ನು ಸಮರ್ಪಕವಾಗಿ ವಿತರಿಸಲಾಗಿದ್ದು, ಸಂಘದಲ್ಲಿ “ನೇತಾಜಿ ಬಹುಪಯೋಗಿ ಸೇವಾಕೇಂದ್ರ”ದ ಹೆಸರಿನಲ್ಲಿ ಗೋದಾಮು ಕಟ್ಟಡ ಇದ್ದು, ಇದರ ಮೂಲಕ ರಾಸಾಯನಿಕ ಗೊಬ್ಬರ, ಸಾವಯವ ಗೊಬ್ಬರ, ಮೈಲುತ್ತುತ್ತು, ಸುಣ್ಣ, ಸೇರಿದಂತೆ ರೈತರಿಗೆ ಬೇಕಾಗುವ ಉತ್ತಮ ಗುಣಮಟ್ಟದ ಕೃಷಿ ಉಪಯುಕ್ತ ಉಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಯೋಗ್ಯ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ರಿಯಾಯಿತಿ ದರದಲ್ಲಿ ಮೈಲುತ್ತುತ್ತು ಸುಣ್ಣ ನೀಡಲಾಗುತ್ತಿದೆ. ಕಡಿಮೆ ಬಡ್ಡಿದರದಲ್ಲಿ ರಾಸಾಯನಿಕ ಗೊಬ್ಬರ ಖರೀದಿಗೆ ಸಾಲ ನಿಡಲಾಗುತ್ತಿದೆ.
ಶಾಖೆಗಳು:
ಸಿದ್ದಕಟ್ಟೆ ಪ್ರಧಾನ ಕಛೇರಿ ಸೇರಿದಂತೆ, ಸಂಘವು ಆರಂಬೋಡಿ, ರಾಯಿ, ಮಾವಿನಕಟ್ಟೆ, ಅರಳ ಎಂಬಲ್ಲಿ ಒಟ್ಟು ನಾಲ್ಕು ಶಾಖೆಗಳನ್ನು ಹೊಂದಿದೆ. ಸಿಸಿ ಕ್ಯಾಮೆರಾ ಹಾಗೂ ಸೈರನ್ ವ್ಯವಸ್ಥೆ ಕಲ್ಪಿಸಲಾಗಿದ್ದು ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್‌ಟಿಜಿಎಸ್, ನೆಫ್ಟ್ ವ್ಯವಸ್ಥೆಯೊಂದಿಗೆ ಕ್ಯೂ ಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ.
ರೈತ ಸಭಾಂಗಣ
ಸಾರ್ವಜನಿಕ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ಸಂಘದ ಸ್ಥಾಪಕ ಅಧ್ಯಕ್ಷ ಬೆಳ್ಳಿಪ್ಪಾಡಿ ಕೃಷ್ಣ ರೈ ಅವರ ಸವಿನೆನಪಿಗಾಗಿ ಅವರ ಹೆಸರಿನಲ್ಲಿ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರ ಕಾರ್ಯಕ್ರಮಗಳಿಗೆ ಸಭಾಂಗಣವನ್ನು ಉಚಿತವಾಗಿ ನೀಡಲಾಗುತ್ತಿದೆ.
ಸೆ.20ಕ್ಕೆ ವಾರ್ಷಿಕ ಮಹಾಸಭೆ
2024-25ನೇ ಸಾಲಿನ ಮಹಾಸಭೆಯು ಸೆ.20ರಂದು ಶನಿವಾರ ಬೆಳಿಗ್ಗೆ 10.30ಕ್ಕೆ ಸಂಘದ ಕೇಂದ್ರ ಕಛೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಸಂದೇಶ್ ಶೆಟ್ಟಿ ಪೊಡುಂಬ, ನಿರ್ದೇಶಕರಾದ ದಿನೇಶ್ ಪೂಜಾರಿ, ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಜಾರಪ್ಪ ನಾಯ್ಕ, ವೀರಪ್ಪ ಪರವ, ಎ.ಶಿವ ಗೌಡ, ಪುಷ್ಪಲತಾ ಎಸ್.ಆರ್, ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೆ, ನವೀನ್ ಹೆಗ್ಡೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ ಸಹಾಯಕ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com






