2025ನೇ ಸಾಲಿನ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
ಬೆಂಗಳೂರು: ರಾಜ್ಯದ ಸಹಕಾರಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿರುವ ಸರ್ಕಾರ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಕಲ್ಪಿಸುವುದು ಹಾಗೂ ನಾಮನಿರ್ದೇಶನ ಮಾಡುವಂತಹ ಅವಕಾಶ ಹೊಂದಿರುವ ಕಾನೂನನ್ನು ರೂಪಿಸಿದೆ. 2025ನೇ ಸಾಲಿನ ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕಕ್ಕೆ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿದೆ. ಪ್ರತಿಪಕ್ಷ ಸದಸ್ಯರ ಆಕ್ಷೇಪ, ಆಗ್ರಹಗಳ ನಡುವೆಯೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಧ್ವನಿಮತದಿಂದ ಈ ವಿಧೇಯಕಕ್ಕೆ ಒಪ್ಪಿಗೆ ಪಡೆದುಕೊಂಡಿದೆ.
https://chat.whatsapp.com/EbVKVnWB6rlHT1mWtsgbch
2024ರಲ್ಲಿ ತಿರಸ್ಕೃತಗೊಂಡಿದ್ದ ವಿಧೇಯಕಕ್ಕೆ ತಿದ್ದುಪಡಿ ತಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಂಡಿಸಿ ಪರ್ಯಾಲೋಚನೆ ಪ್ರಕ್ರಿಯೆ ನಡೆಸಿದರು. ಪ್ರಾಥಮಿಕ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ಇತರ ಪ್ರಾಥಮಿಕ ನೆರವು ಪಡೆವ ಸಹಕಾರ ಸಂಘಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಯಲ್ಲಿ ಎಸ್‌ಸಿ/ಎಸ್‌ಟಿ ಇತರ ಹಿಂದುಳಿದ ವರ್ಗ, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗುತ್ತಿದೆ. ಈ ಮೂಲಕ ಸಹಕಾರ ಸಂಸ್ಥೆಗಳಲ್ಲಿಯೂ ಸಾಮಾಜಿಕ ನ್ಯಾಯ ಕಲ್ಪಿಸಲಾಗುತ್ತಿದೆ.
ಆರಗ ಜ್ಞಾನೇಂದ್ರ ಆಕ್ಷೇಪ: ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ತಿದ್ದುಪಡಿ ಕಾಯ್ದೆಯಿಂದ ಸಹಕಾರಿ ಸಂಘಗಳು ದುರ್ಬಲಗೊಳ್ಳುವ ಸಾಧ್ಯತೆ ಇದೆ. ರಾಜ್ಯದಲ್ಲಿ 45 ಸಾವಿರಕ್ಕೂ ಅಧಿಕ ಪ್ರಾಥಮಿಕ ಸಹಕಾರ ಸಂಘಗಳಿದ್ದು ನಿರ್ದೇಶಕರು ಪ್ರತಿ ವರ್ಷ ಆಸ್ತಿ ಘೋಷಣೆ ಮಾಡುವುದು ಅಸಾಧ್ಯವಾಗಲಿದೆ. ಅಲ್ಲದೆ, ಆಡಿಟ್ ಮಾಡಲು ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಸಹಕಾರ ಸಂಘಗಳ ಕಾರ್ಯದ ಜೊತೆ ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದ್ದು ಇದು ಪ್ರಜಾಪ್ರಭುತ್ವ ವಿರೋಧಿ ವಿಧೇಯಕವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆಸ್ತಿ ವಿವರ ಸಲ್ಲಿಕೆ ನಿರ್ಧಾರ ಪರಿಷ್ಕರಿಸಿ: ವಿಧೇಯಕ ತಿದ್ದುಪಡಿ ಸಮಿತಿ ಅಧ್ಯಕ್ಷರೂ ಆದ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಮೂರು ಜನರನ್ನು ನಾಮನಿರ್ದೇಶನ ಮಾಡಿದ್ದರೂ, ಅವರಿಗೆ ಮತದಾನದ ಹಕ್ಕು ನೀಡಿಲ್ಲ. ಮತದಾನಕ್ಕೆ ಅವಕಾಶ ಕೊಡಬೇಕು. ನಿರ್ದೇಶಕರ ಆಸ್ತಿ ವಿವರ ಸಲ್ಲಿಕೆ ನಿರ್ಧಾರ ಪರಿಷ್ಕರಿಸಬೇಕು ಎಂಬ ಸಲಹೆ ನೀಡಿದರು.
ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಮೀಸಲಾತಿಗೆ ವಿರೋಧವಿಲ್ಲ. ಆದರೆ ಇದರಲ್ಲಿ ಸರ್ಕಾರ ಮತ್ತು ರಾಜಕೀಯ ಹಸ್ತಕ್ಷೇಪ ಇರದಂತೆ ನೋಡಿಕೊಳ್ಳಬೇಕು. ಹಸ್ತಕ್ಷೇಪ ಆದರೆ ಸಹಕಾರ ಸಂಘಗಳು ಉಳಿಯುವುದಿಲ್ಲ. ಜತೆಗೆ ದುರುಪಯೋಗ ಆಗುತ್ತಿರುವ 121ನೇ ಕಾಯ್ದೆಗೆ ತಿದ್ದುಪಡಿ ತರುವಂತೆ ಹೇಳಿದರು.
ಪ್ರತಿವರ್ಷ ಆಸ್ತಿ ವಿವರ ಸಲ್ಲಿಕೆ ಸಾಧ್ಯವಾ?: ಹಿರಿಯ ಶಾಸಕ ಜಿ.ಟಿ ದೇವೇಗೌಡ ಮಾತನಾಡಿ, ದಲಿತರಿಗೆ ಮೀಸಲಾತಿ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ವಿರೋಧವಿಲ್ಲ. ಆದರೆ ನಿರ್ದೇಶಕರು ಪ್ರತಿವರ್ಷ ಆಸ್ತಿ ವಿವರ ಘೋಷಣೆ ಮಾಡುವುದು ಸಾಧ್ಯವಾ? ಸರ್ಕಾರ ಬೇರೆ, ಸಹಕಾರ ಬೇರೆ. ಹಾಗಾಗಿ ತಿದ್ದುಪಡಿ ತರುವ ಬದಲು ಸಹಕಾರ ಕ್ಷೇತ್ರವನ್ನೇ ಮುಚ್ಚಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

