Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸರ್ವಸ್ವವನ್ನೂ ಸಹಕಾರಿ ರಂಗಕ್ಕೆ ಅರ್ಪಿಸಿದ ಸಹಕಾರ ಪಿತಾಮಹ ಮೊಳಹಳ್ಳಿ ಶಿವರಾವ್
    News

    ಸರ್ವಸ್ವವನ್ನೂ ಸಹಕಾರಿ ರಂಗಕ್ಕೆ ಅರ್ಪಿಸಿದ ಸಹಕಾರ ಪಿತಾಮಹ ಮೊಳಹಳ್ಳಿ ಶಿವರಾವ್

    adminBy adminAugust 4, 2025

    ಮಂಗಳೂರು: ಸಹಕಾರ ಎಂಬ ಶಬ್ಧದ ಹಿಂದೆ ಬಹಳಷ್ಟು ಅರ್ಥವಿದೆ. ಯಾವುದೇ ಕೆಲಸವಾಗಲಿ ಒಬ್ಬರಿಗೊಬ್ಬರು ಹೆಗಲಿಗೆ ಹೆಗಲು ಜೋಡಿಸಿ ದುಡಿಯುವುದೇ ಸಹಕಾರದ ತತ್ವ. ಒಂದು ಕಾಲದಲ್ಲಿ ನಮ್ಮ ಹಿರಿಯರು ಕೃಷಿ ಕೆಲಸ ಮಾಡುವಾಗ ಹೊಲ -ಗದ್ದೆಗಳಲ್ಲಿ ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡುತ್ತಿದ್ದರು. ಒಂದು ಮನೆಯವರು ಕೃಷಿ ಕೆಲಸದಲ್ಲಿ ತೊಡಗಿದರೆಂದರೆ ಅಕ್ಕಪಕ್ಕದ ಮನೆಯವರು ಅವರಿಗೆ ಜೊತೆಯಾಗುತ್ತಿದ್ದರು. ಸಿಗುವ ಫಸಲನ್ನು ಹಂಚಿ ತಿನ್ನುವ ಕಾಲವದಾಗಿತ್ತು. ಇದುವೇ ಸಹಕಾರ ತತ್ವದ ಮೂಲವಾಗಿತ್ತು. ಈ ತತ್ವದ ಮೂಲವನ್ನೇ ಹಿಡಿದುಕೊಂಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಮಹಾನ್‌ ಚೇತನವೊಂದರ ಜನ್ಮವಾಗಿತ್ತು. ಅವರೇ ಕರಾವಳಿ ಭಾಗದಲ್ಲಿ ಸಹಕಾರ ತತ್ವದ ಮಂತ್ರವನ್ನು ಊರಿಂದೂರಿಗೆ ಪಸರಿಸಿದ ಮಹಾನ್‌ ಚೇತನ, ತಮ್ಮ ಸರ್ವಸ್ವವನ್ನೂ ಸಹಕಾರ ಕ್ಷೇತ್ರದ ಏಳಿಗೆಗೆ ಅರ್ಪಿಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಪಿತಾಮಹ ಮೊಳಹಳ್ಳಿ ಶಿವರಾಯರು.

    https://chat.whatsapp.com/EbVKVnWB6rlHT1mWtsgbch

    ಮೊಳಹಳ್ಳಿ ಶಿವರಾಯರು ಕರಾವಳಿ ಭಾಗದಲ್ಲಿ ಸಹಕಾರ ಚಳುವಳಿಯ ಹರಿಕಾರರು. ಸಹಕಾರ ತತ್ವ, ಸಹಕಾರ ಮಂತ್ರವನ್ನು ತನ್ನ ಜೀವಿತಾವಧಿಯ ಕೊನೆಯವರೆಗೂ ಪಾಲಿಸಿಕೊಂಡು ಬಂದ ಮೊಳಹಳ್ಳಿ ಶಿವರಾಯವರು ಸಹಕಾರ ರಂಗದಲ್ಲಿ ಮಾಡಿರುವ ಕಾರ್ಯ ದಾಖಲಾರ್ಹವಾದುದು. ಸಹಕಾರ ಕ್ಷೇತ್ರದಲ್ಲಿ ಅವರು ಕೈಗೊಂಡ ಕಾರ್ಯಗಳೆಲ್ಲವೂ ಸಾವಿರಾರು ಜನರ ಜೀವನಕ್ಕೆ ಆಸರೆಯಾಗಿದೆ. ಸಹಕಾರ ರಂಗದ ಪಿತಾಮಹರಾಗಿ ಆದರ್ಶ ಸೇವಾ ಧುರೀಣರಾಗಿ ದಕ್ಷಿಣ ಭಾರತದಲ್ಲೇ ಅತ್ಯಂತ ಸುಪ್ರಸಿದ್ಧರಾಗಿದ್ದ ಮೊಳಹಳ್ಳಿ ಶಿವರಾಯರು ತಮ್ಮ ಹೃದಯ ವೈಶಾಲ್ಯ, ನಿಸ್ವಾರ್ಥ ಸೇವೆ, ಅನುಭವ ಪೂರ್ಣ ವ್ಯವಹಾರ ಚಾತುರ್ಯ ಮೊದಲಾದ ಗುಣಗಳಿಂದ ಎಂದೆಂದಿಗೂ ಮರೆಯಲಾಗದ ವ್ಯಕ್ತಿಯಾಗಿ ಭಾರತದ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ.

    ಆಗಸ್ಟ್ -4 ಶಿವರಾಯರ ಜನ್ಮದಿನ. 1880ರ ಆ.4ರಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಮೊಳಹಳ್ಳಿಯಲ್ಲಿ ರಂಗಪ್ಪಯ್ಯ ಹಾಗೂ ಮೂಕಾಂಬಿಕಾ ದಂಪತಿಯ ಮಗನಾಗಿ ಶಿವರಾಯರು ಜನಿಸಿದರು. ಜಿಲ್ಲೆಯ ಸಹಕಾರ ಚಳವಳಿಯ ಹರಿಕಾರರಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ರಂಗದ ಬೆಳವಣಿಗೆಗೆ ಸದ್ದಿಲ್ಲದೆ ದುಡಿದು ಈ ರಂಗದ ಬೆಳವಣಿಗೆಗೆ ಪ್ರೋತ್ಸಾಹದ ಮಳೆಗರೆದವರು ಮೊಳಹಳ್ಳಿಯವರು. ಮಾತ್ರವಲ್ಲ, ತನ್ನ ಸರ್ವಸ್ವವನ್ನೂ ಸಹಕಾರಿ ರಂಗಕ್ಕೆ ಅರ್ಪಿಸಿದ್ದರು. ಸಮಾಜಸೇವೆಯನ್ನೇ ತನ್ನ ಪರಮ ಗುರಿಯಾಗಿಸಿಕೊಂಡ ಶಿವರಾಯರು ಜನಸೇವೆಗಾಗಿ ಅಹರ್ನಿಶಿ ದುಡಿದವರು. ಇವರ ಪವಾಡ ಸದೃಶ ಕಾರ್ಯವೈಖರಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಹಕಾರಿ ಚಳವಳಿ ಬಲವಾಗಿ ಬೇರೂರಿದೆ.  ವಿದ್ಯಾರ್ಥಿ ದೆಸೆಯಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಮುಂದೆ ಸಹಕಾರ ಕ್ಷೇತ್ರದ ಜೊತೆಗೆ ಅನೇಕ ವಿದ್ಯಾಸಂಸ್ಥೆಗಳ ಸ್ಥಾಪನೆಗೂ ಕಾರಣಕರ್ತರಾದ ಇವರು ಸಾರ್ವಜನಿಕ ಕ್ಷೇತ್ರಗಳಲ್ಲಿ ಕೂಡ ಪ್ರಾಮಾಣಿಕ, ದಕ್ಷ ಸೇವೆಯನ್ನು ಸಲ್ಲಿಸಿ ಸಾಮಾಜಿಕ ಪರಿವರ್ತನೆಯ ಹರಿಕಾರರೆನಿಸಿಕೊಂಡರು.

    ನಾನು ನಿನಗಾಗಿ, ನೀನು ನನಗಾಗಿ, ನಾವೆಲ್ಲರೂ ದೇಶಕ್ಕಾಗಿ ಎಂಬ ತಾತ್ವಿಕ ನೆಲೆಯಲ್ಲಿ ರೂಪುಗೊಂಡ ಸಹಕಾರ ಕ್ಷೇತ್ರ ಇಂದು ದೇಶ-ವಿದೇಶಗಳಲ್ಲೂ ಛಾಪು ಮೂಡಿಸಿದ ಅಪೂರ್ವ ಕ್ಷೇತ್ರ. ಸಮಬಾಳ್ವೆ ತತ್ವ ಪ್ರತಿಪಾದಿಸುವ ಸಹಕಾರ ಕ್ಷೇತ್ರ ಸಾಮಾಜಿಕ ಪರಿವರ್ತನೆಗೆ ತನ್ನದೇ ಕೊಡುಗೆ ನೀಡಿದೆ. ಇಂಥ ಮಹಾನ್ ಕ್ಷೇತ್ರವನ್ನು ಸಂಪನ್ನಗೊಳಿಸಿದವರು ಹಲವರು. ಅಂಥ ಮಹಾನುಭಾವರಲ್ಲಿ ಸ್ಮರಿಸಲೇಬೇಕಾದ ಹೆಸರು ಮೊಳಹಳ್ಳಿ ಶಿವರಾಯರದು.  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆಮೂಲೆಯಲ್ಲೂ ಸಹಕಾರ ಆಂದೋಲನ ಸಂಘಟಿಸಿ ಹಲವು ಸಹಕಾರ ಸಂಸ್ಥೆಗಳ ಸ್ಥಾಪನೆಗೆ ಕಾರಣರಾಗಿದ್ದರು. ಇದರಿಂದ ಅವರನ್ನು ಅವಿಭಜಿತ ಜಿಲ್ಲೆಯ `ಸಹಕಾರ ಪಿತಾಮಹ’ರೆಂದೇ ಕರೆಯಲಾಗುತ್ತಿದೆ. ಸಹಕಾರ ಕ್ಷೇತ್ರದ ಮೂಲಕ ಗ್ರಾಮಾಭಿವೃದ್ಧಿಯ ಕನಸು ಕಂಡ ಇವರು, ಗ್ರಾಮ ಭಾರತ ನಿರ್ಮಾಣವೇ ನನ್ನ ಗುರಿ, ಅದರ ಸಾರ್ಥಕತೆಗೆ ಸಹಕಾರ ಕ್ಷೇತ್ರ ಉತ್ತಮ ಸಾಧನ ಎಂದಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕಲ್ಪನೆಗೆ ಸಹಕಾರ ಆಂದೋಲನದ ಮುಖಾಂತರ ಜಿಲ್ಲೆಯಲ್ಲಿ ಭದ್ರ ಅಡಿಪಾಯ ಹಾಕಿ ಅದ್ಭುತ ರೀತಿಯಲ್ಲಿ ಸಾಕ್ಷಾತ್ಕರಿಸಿದ್ದಾರೆ. ೧೯೬೭ರ ಜುಲೈ ೪ರಂದು ಕೀರ್ತಿಶೇಷರಾದರೂ ಶಿವರಾಯರು ಸಹಕಾರ ರಂಗದಲ್ಲಿ ಮೂಡಿಸಿದ ಛಾಪು ಅಜರಾಮರ. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ಸಹಕಾರ ಕ್ಷೇತ್ರದತ್ತ ಹೆಚ್ಚು ಕಾರ್ಯೋನ್ಮುಖರಾಗಿದ್ದರು.

    ಸಹಕಾರ ಆಂದೋಲನ

    ದೇಶದಲ್ಲಿ ಸಹಕಾರ ಆಂದೋಲನ 1904 ಮಾರ್ಚ್ 23ರಂದು ಕಾಯ್ದೆ ರೂಪದಲ್ಲಿ ಜಾರಿಗೆ ಬಂದಾಗ ಅದರ ಪ್ರಭಾವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೂ ಪಸರಿಸಿತು. ಆ ಸಂದರ್ಭ ಮೊಳಹಳ್ಳಿ ಶಿವರಾವ್ ಅವರು, ಸಹಕಾರ ಸಂಘಗಳ ಸಂಘಟನೆಗೆ ಮುಂದಾದರು. ಸಹಕಾರ ಚಳವಳಿಯನ್ನು ಬಲಿಷ್ಠವಾಗಿ ಕಟ್ಟುವ ಉದ್ದೇಶದಿಂದ ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಸಹಕಾರ ಸಂಘಗಳನ್ನು ಸ್ಥಾಪಿಸಿದರು. 1919ರಲ್ಲಿ ಮೊದಲ ಸಹಕಾರಿ ಕ್ರೆಡಿಟ್ ಸೊಸೈಟಿ ಸ್ಥಾಪಿಸಿದರು. ಅಂದು ಮೊಳಹಳ್ಳಿಯವರು ಸ್ಥಾಪಿಸಿದ್ದ ಆ ಸಹಕಾರ ಸಂಘ ಇಂದು ಪುತ್ತೂರು ಟೌನ್ ಕೋಆಪರೇಟಿವ್ ಬ್ಯಾಂಕ್ ಆಗಿ ಬೆಳೆದು ನಿಂತಿರುವುದನ್ನು ಕಾಣಬಹುದು.

    ಎಸ್‌ಸಿಡಿಸಿಸಿ ಬ್ಯಾಂಕ್ ಸ್ಥಾಪನೆ

    ಹಳ್ಳಿಹಳ್ಳಿಗಳಲ್ಲಿ ಸ್ಥಾಪನೆಗೊಂಡ ಸಹಕಾರ ಸಂಘಗಳಿಗೆ ಹಣಕಾಸಿನ ನೆರವಿನ ಅಗತ್ಯ ಮನಗಂಡು ಮಾತೃಸಂಸ್ಥೆಯೊಂದನ್ನು ಹುಟ್ಟುಹಾಕುವ ನಿರ್ಧಾರ ಕೈಗೊಂಡು 1914ರಲ್ಲಿ ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಸ್ಥಾಪಿಸಿದರು. ಆಗ ಮೊಳಹಳ್ಳಿ ಶಿವರಾವ್ ಅವರೇ ಬ್ಯಾಂಕ್ ಅಧ್ಯಕ್ಷರಾಗಬೇಕೆಂದು ಎಲ್ಲರೂ ಬಯಸಿದ್ದರು. ಅದನ್ನು ನಯವಾಗಿ ತಿರಸ್ಕರಿಸಿದ ಶಿವರಾಯರು 1914ರಿಂದ 1928ರವರೆಗೆ ಬ್ಯಾಂಕ್ ಉಪಾಧ್ಯಕ್ಷರಾಗಿ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಶಕ್ತಿಯಾದರು. ರೈತರ ಅನುಕೂಲಕ್ಕಾಗಿ 1925ರಲ್ಲಿ ಈ ಬ್ಯಾಂಕ್ ಪುತ್ತೂರಿನಿಂದ ಜಿಲ್ಲಾಕೇಂದ್ರ ಮಂಗಳೂರಿಗೆ ವರ್ಗಾಯಿಸಲ್ಪಟ್ಟಿತು. ಮೊಳಹಳ್ಳಿ ಶಿವರಾಯರು 1931ರಲ್ಲಿ ಪ್ರಥಮ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿ 1952ರವರೆಗೆ 21 ವರ್ಷ ಕಾಲ ಯಶಸ್ವಿಯಾಗಿ ಮುನ್ನಡೆಸಿದರು. ಸಹಕಾರಿ ಕ್ಷೇತ್ರದಲ್ಲಿ ಇಂದು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿರುವ ಹೆಗ್ಗಳಿಕೆ ಎಸ್‌ಸಿಡಿಸಿಸಿ ಬ್ಯಾಂಕ್‌ಗಿದೆ.

    ವಿವಿಧ ಸಂಘಗಳ ಸ್ಥಾಪನೆ

    ಶಿವರಾವ್ ಕೃಷಿಕರ ಶ್ರೇಯೋಭಿವೃದ್ಧಿಯನ್ನೇ ಸಹಕಾರಿ ಸಂಘದ ಮುಖ್ಯ ಧ್ಯೇಯವಾಗಿಸಿಕೊಂಡು ಕಾರ್ಯನಿರ್ವಹಿಸಿದ್ದಾರೆ.  1919ರಲ್ಲಿ ಪುತ್ತೂರಿನಲ್ಲಿ ಕೃಷಿಕರ ಸಹಕಾರಿ ಭಂಡಸಾಲೆ ಸಂಘ ಸ್ಥಾಪಿಸಿದರು. ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯುವಂತೆ ಶ್ರಮಿಸಿದ ಈ ಸಂಘ 1948ರವರೆಗೆ ಪುತ್ತೂರಿನಲ್ಲೇ ಇದ್ದು ಮುಂದೆ ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಹಕಾರಿ ಸಂಘವಾಗಿ ಮಂಗಳೂರಿಗೆ ಸ್ಥಳಾಂತರಗೊಂಡಿತ್ತು. 1936ರಲ್ಲಿ ಪುತ್ತೂರು ಸಹಕಾರಿ ಭೂ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆಗೆ ಕಾರಣರಾದ ಶಿವರಾವ್ ಅದರ ಸ್ಥಾಪಕಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ದ್ರಾವಿಡ ಬ್ರಾಹ್ಮಣ ಸಹಕಾರಿ ಹಾಸ್ಟೆಲ್ ಸಂಘ, ಸಹಕಾರಿ ಸ್ಟೋರ್ಸ್‌,  ಧಾನ್ಯದ ಬ್ಯಾಂಕ್, ಮಹಿಳೆಯರ ಕೈಗಾರಿಕಾ ಸಂಘ, ಬಿಲ್ಡಿಂಗ್ ಸೊಸೈಟಿ ಮೊದಲಾದ ಸಹಕಾರಿ ಸಂಘಗಳನ್ನು ಪುತ್ತೂರಿನಲ್ಲಿ ಸ್ಥಾಪಿಸಿದ್ದರು. ಎರಡನೇ ಮಹಾಯುದ್ಧದ ಕಾಲದಲ್ಲಿ ಜಿಲ್ಲಾದ್ಯಂತ ತಲೆದೋರಿದ ಆಹಾರ ಧಾನ್ಯದ ಕೊರತೆ ಹೋಗಲಾಡಿಸಲು ಶಿವರಾಯರು ದ.ಕ. ಜಿಲ್ಲಾ ಸೆಂಟ್ರಲ್ ಕೋ-ಆಪರೇಟಿವ್ ಹೋಲ್‌ಸೇಲ್ ಸ್ಟೋರ್ಸ್‌ ಸಂಘ –ಜನತಾ ಬಜಾರ್ ಸ್ಥಾಪಿಸಿದರು.

    ಶಿಕ್ಷಣ ಕ್ಷೇತ್ರದಲ್ಲೂ ಸಾಧನೆ

    ಮೊಳಹಳ್ಳಿ ಶಿವರಾಯರು 1916ರಲ್ಲಿ ಪುತ್ತೂರಲ್ಲಿ ಎಜುಕೇಶನ್ ಸೊಸೈಟಿ ಸ್ಥಾಪಿಸಿ ಹೈಸ್ಕೂಲ್ ಆರಂಭಿಸಿದರು. 1917ರಲ್ಲಿ ವಿಟ್ಲದಲ್ಲಿ ಖಾಸಗಿ ಎಲಿಮೆಂಟರಿ ಶಾಲೆ ಹಾಗೂ ದಕ್ಷಿಣ ಕನ್ನಡ ಗೌಡ ಶಿಕ್ಷಣ ಸಂಘ ಸ್ಥಾಪಿಸಿದರು. ಪುತ್ತೂರು ತಾಲೂಕಿನ ಅನೇಕ ಎಲಿಮೆಂಟರಿ ಶಾಲೆಗಳನ್ನು ಹೈಯರ್ ಎಲಿಮೆಂಟರಿ ಶಾಲೆಗಳನ್ನಾಗಿ, ಹೈಯರ್ ಎಲಿಮೆಂಟರಿ ಶಾಲೆಗಳನ್ನು ಹೈಸ್ಕೂಲ್ ಆಗಿ ಬದಲಿಸುವಲ್ಲಿ ಮೊಳಹಳ್ಳಿ ಶಿವರಾಯರ ಅಪಾರ ಪರಿಶ್ರಮವಿದೆ. ಶಿವರಾಯರು ಹಿಂದುಳಿದ ಬಡವರ ಉದ್ಧಾರಕ್ಕೂ ಪ್ರಯತ್ನಿಸಿದ್ದಾರೆ. ಮದ್ಯಪಾನ ನಿಷೇಧ, ಅಸ್ಪೃಶ್ಯತೆ ನಿವಾರಣೆ ಹಾಗೂ ಗ್ರಾಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವಲ್ಲಿ ಜನರನ್ನು ಸಂಘಟಿಸಿದ್ದಾರೆ.  

    ಸಹಕಾರಿ ದಿಗ್ಗಜ, ವಿವಿಧ ಸಾಧನೆ

    ಮೊಳಹಳ್ಳಿ ಶಿವರಾಯರು ಸಹಕಾರ ಕ್ಷೇತ್ರದ ದಿಗ್ಗಜ. ರಚನಾತ್ಮಕ ಕೆಲಸಗಳಲ್ಲಿ ಅವರು ಅಗ್ರಜರಾಗಿದ್ದರು. ಯಾವತ್ತೂ ಸೋಲರಿಯದ ಛಲದಂಕಮಲ್ಲ. ಶೋಷಣೆ ರಹಿತ ಸಮಾಜ ಕಾಣುವ ಹಂಬಲದ ಕನಸುಗಾರರಾಗಿದ್ದ ಅವರು, ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಸಹಕಾರ ರಂಗವು ಮುಖ್ಯವಾಗಿ ಕೃಷಿಕರ ಅನುಕೂಲಕ್ಕಾಗಿ ಶ್ರಮಿಸಬೇಕು ಎಂಬ ಕನಸು ಕಂಡಿದ್ದರು. ಕೃಷಿಕರು ಉತ್ಪಾದಿಸಿದ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಇಲ್ಲದೆ ಸಂಕಷ್ಟ ಸ್ಥಿತಿಯಲ್ಲಿದ್ದಾಗ ೧೯೧೯ರಲ್ಲಿ ಪುತ್ತೂರಿನಲ್ಲಿ ಕೃಷಿಕರ ಸಹಕಾರಿ ಭಂಡಸಾಲೆ ಎಂಬ ಸಂಘ ಸ್ಥಾಪಿಸಿದರು. ಈ ಮೂಲಕ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯುವಂತಾಯಿತು. 1936ರಲ್ಲಿ ಪುತ್ತೂರು ಸಹಕಾರಿ ಭೂ ಅಭಿವೃದ್ಧಿ ಬ್ಯಾಂಕ್‌ನ ಸ್ಥಾಪನೆಗೆ ಕಾರಣರಾದ ಶಿವರಾಯರು ಇದರ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪುತ್ತೂರನ್ನು ಸಹಕಾರ ಆಂದೋಲನದ ಉಗಮ ಕೇಂದ್ರವಾಗಿಸಿಕೊಂಡ ಶಿವರಾಯರ ಕಾರ್ಯಕ್ಷೇತ್ರ ಇಲ್ಲಿ ಬಹುಮುಖವಾದುದು.

    Molahalli Shivarao Sahakara Spandana SCDCC Bank Souharda Sahakari Spandana Cooperative Spandana NEws Spandana Trust
    Previous Articleಆದರ್ಶ ಬ್ಯಾಂಕ್‌ ಆಗಿ ಎಂಸಿಸಿ ಬ್ಯಾಂಕ್‌ ಗುರುತು
    Next Article ಕರಾವಳಿಯಲ್ಲಿ ಸಹಕಾರ ಕ್ಷೇತ್ರ ಗಟ್ಟಿಯಾಗಿ ತಳವೂರಲು ಮೊಳಹಳ್ಳಿ ಶಿವರಾವ್‌ ಹಾಕಿದ ಭದ್ರ ಅಡಿಪಾಯ ಕಾರಣ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.