ಮಂಗಳೂರು: ಆಟಿ ತಿಂಗಳಲ್ಲಿ ತುಳು ಜನರು ಆಚರಣೆ ಮಾಡುವ ಆಟಿಡೊಂಜಿ ದಿನವನ್ನು “ಆಟಿದ ಪೊಲಬು” ಎಂಬ ಹೆಸರಿನಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಮಂಗಳೂರಿನ ಪ್ರಧಾನ ಕಛೇರಿ ಪಡೀಲ್‌ನ “ಆತ್ಮಶಕ್ತಿ ಸೌಧ”ದಲ್ಲಿ ಆಚರಿಸಲಾಯಿತು.
https://chat.whatsapp.com/EbVKVnWB6rlHT1mWtsgbch
ದೈವಾರಾಧಕ ಪೂವಪ್ಪ ಪೂಜಾರಿಯವರು ಹಿಂಗಾರ ಅರಳಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಈ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಪೂವಪ್ಪ ಪೂಜಾರಿ, ನಾಟಿ ವೈದ್ಯ ತಿಲಕ್‌ರಾಜ್ ಹಾಗೂ ಕಾಸರಗೋಡಿನ ಪೆರಿಯದ ಕೇರಳ ಕೇಂದ್ರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಚೇತನ್ ಮುಂಡಾಜೆ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಪ್ರಾಧ್ಯಾಪಕ ಚೇತನ್ ಮುಂಡಾಜೆ ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ದೈವಾರಾಧಕರು ಹಾಗೂ ನಾಟಿ ವೈದ್ಯರನ್ನು ಸನ್ಮಾನಿಸುವ ಮೂಲಕ ತುಳುನಾಡಿನ ಸಂಸ್ಕೃತಿ ಹಾಗೂ ಭಾಷೆಯನ್ನು ಬೆಳೆಸುವ ಕೆಲಸ ಮಾಡುತ್ತಿದೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ರವರ ನೇತೃತ್ವದಲ್ಲಿ “ಆಟಿದ ಪೊಲಬು” ವಿಶಿಷ್ಟ ಕಾರ್ಯಕ್ರಮ ಆಯೋಜಿಸಿ, ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ವೇದಿಕೆ ನಿರ್ಮಾಣ ಮಾಡಿರುವುದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದೆ” ಎಂದರು.





ನಾಟಿ ವೈದ್ಯರಾದ ತಿಲಕ್‌ರಾಜ್ ನಾಟಿ ಔಷಧಿ ಪದ್ದತಿಗಳ ಬಗ್ಗೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ “ಆಟಿ ತಿಂಗಳಲ್ಲಿ ತುಳು ಜನರು ಆಚರಣೆ ಮಾಡುವ ಆಟಿಡೊಂಜಿ ದಿನವನ್ನು ನಮ್ಮ ಸಂಸ್ಥೆಯಲ್ಲಿ “ಆಟಿದ ಪೊಲಬು” ಎಂಬ ಹೆಸರಿನಿಂದ ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಾ ಇದ್ದೇವೆ. ಆಟಿದ ಪೊಲಬು ಕಾರ್ಯಕ್ರಮದ ಮುಖ್ಯ ಉದ್ದೇಶ ಪ್ರತಿಯೊಬ್ಬರಿಗೆ ತುಳುನಾಡಿನ ಸಂಸ್ಕೃತಿಯನ್ನು ಪರಿಚಯಿಸುವುದು. ಇದು ಆತ್ಮಶಕ್ತಿ ಕುಟುಂಬದ ಕಾರ್ಯಕ್ರಮ. ಇದರಲ್ಲಿ ನಮ್ಮ ಸಿಬ್ಬಂದಿಗಳು ಅವರ ಮನೆಯಲ್ಲಿ ತಯಾರು ಮಾಡಿದ ರುಚಿರುಚಿಯಾದ ತುಳುನಾಡಿನ ಆಟಿ ತಿಂಗಳಿನ ವಿವಿಧ ತಿಂಡಿ ತಿನಿಸುಗಳು, ಭಕ್ಷ್ಯ ಭೋಜನಗಳನ್ನು ತಂದಿರುತ್ತಾರೆ. ಅಲ್ಲದೇ ಈ ಬಾರಿಯ ವೇದಿಕೆಯನ್ನು ಆಟಿ ತಿಂಗಳ ಮಹತ್ವವನ್ನು ಸಾರುವ ವಿಷಯವನ್ನು ಅಳವಡಿಸಿ ಅತ್ಯಂತ ಅರ್ಥಪೂರ್ಣವಾಗಿ ನಿರ್ಮಿಸಲಾಗಿದೆ. ಆತ್ಮಶಕ್ತಿ ಎಂಬುದು ಒಂದು ಕುಟುಂಬ ಇದ್ದ ಹಾಗೆ, ಇಲ್ಲಿಯ ಸಿಬ್ಬಂದಿಗಳು ಇಲ್ಲಿಯ ಕೆಲಸವನ್ನು ತನ್ನ ಸ್ವಂತ ಕುಟುಂಬದ ಕೆಲಸ ಎನ್ನುವ ಹಾಗೆ ಮಾಡುತ್ತಾ ಬರುತ್ತಾ ಇದ್ದಾರೆ. ಈ ಆಟಿದ ಕೂಟದ ಯಶಸ್ವಿಗೆ ಸಹಕರಿಸಿದ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಅವರ ಮನೆಯವರಿಗೆ ಧನ್ಯವಾದಗಳನ್ನು ಸಮರ್ಪಣೆ ಮಾಡಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ಗೌರವಾಧ್ಯಕ್ಷ ವಾಮನ್ ಕೆ, ಸಂಘದ ಹಿರಿಯ ಸದಸ್ಯರಾದ ಯು.ಮಾಧವ ಸುವರ್ಣ, ಶೀನ ಪೂಜಾರಿ ಮತ್ತಿತ್ತರರರು ಉಪಸ್ಥಿತರಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಪರಮೇಶ್ವರ ಜಿ. ಪೂಜಾರಿ, ಆನಂದ್ ಎಸ್ ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ಮುದ್ದುಮೂಡುಬೆಳ್ಳೆ, ಗೋಪಾಲ್ ಎಮ್, ಉಮಾವತಿ, ಚಂದ್ರಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಮತ್ತಿತರರು ಭಾಗವಹಿಸಿದರು. ಸಂಘದ ಹಿರಿಯ ಶಾಖಾಧಿಕಾರಿ ಯಶವಂತಿ ಸ್ವಾಗತಿಸಿ, ಹಿರಿಯ ಶಾಖಾಧಿಕಾರಿ ಸ್ವಾತಿ ವಂದಿಸಿದರು. ಶಾಖಾಧಿಕಾರಿ ಶ್ರೀಮತಿ ಧನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

