ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸುರತ್ಕಲ್ ಸ್ಥಳಾಂತರಿತ ಶಾಖೆಗೆ ಚಾಲನೆ ನೀಡಿ ಗಣ್ಯರ ಅಭಿಪ್ರಾಯ
ಸುರತ್ಕಲ್: ಸುರತ್ಕಲ್ ಪೂರ್ವ ಆರ್ಕೇಡ್‌ನಲ್ಲಿ 2013ರಿಂದ ಕಾರ್ಯಾಚರಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆಯನ್ನು ಶುಕ್ರವಾರ ಸುರತ್ಕಲ್ ಮುಖ್ಯ ರಸ್ತೆಯಲ್ಲಿರುವ ವಿಜಯ್ ಮಹಲ್ ಕಾಂಪ್ಲೆಕ್ಸ್‌ನ ಸುಸಜ್ಜಿತ ಹವಾನಿಯಂತ್ರಿತ ಶಾಖೆಗೆ ಸ್ಥಳಾಂತರಗೊಳಿಸಲಾಯಿತು.
https://chat.whatsapp.com/EbVKVnWB6rlHT1mWtsgbch
ಕಂಕನಾಡಿ ಗರಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುರತ್ಕಲ್ ಶಾಖೆ ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರ ಆಗಿರುವುದು ತುಂಬ ಸಂತೋಷದ ವಿಷಯ. ನಮ್ಮದೇ ಸೊಸೈಟಿ ಆಗಬೇಕೆಂಬ ನಮ್ಮ ಮಹದಾಸೆಗೆ ಆತ್ಮಶಕ್ತಿ ಸಹಕಾರಿ ಶಕ್ತಿ ನೀಡಿದೆ. ಈ ಸಂಸ್ಥೆಯು ಇಷ್ಟು ವೇಗವಾಗಿ 33 ಶಾಖೆಗಳನ್ನು ಮಾಡಿರುವುದು ಅಸಾಮಾನ್ಯ ಸಾಧನೆ. ಇದರಲ್ಲಿ ಚಿತ್ತರಂಜನ್ ಬೋಳಾರ್ ಅವರ ಕ್ರಿಯಾಶೀಲ ನಾಯಕತ್ವ, ಎಲ್ಲ ಸಿಬ್ಬಂದಿಗಳ ಅವಿರತವಾದ ಶ್ರಮ ಮತ್ತು ಆಡಳಿತ ಮಂಡಳಿಯವರ ಸಹಕಾರ ಇದೆ ಎಂದು ಶ್ಲಾಘಿಸಿದರು.



ಗಣಕೀಕೃತ ವ್ಯವಸ್ಥೆಗೆ ಚಾಲನೆ ನೀಡಿದ ಮಾತನಾಡಿದ ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಚಿತ್ತರಂಜನ್ ಬೋಳಾರ್ ಅವರು ಆತ್ಮಶಕ್ತಿ ಸಹಕಾರಿಯನ್ನು ಅಭೂತಪೂರ್ವವಾಗಿ ಮತ್ತು ಶಿಸ್ತುಬದ್ಧವಾಗಿ ಬೆಳೆಸಿದ್ದಾರೆ. ಸಂಸ್ಥೆಯ ಬೆಳವಣಿಗೆಗೆ ಚಿತ್ತರಂಜನ್ ಬೋಳಾರ್ ಅವರ ನಾಯಕತ್ವವೇ ಕಾರಣ. ಒಂದು ಸಂಸ್ಥೆ ಲಾಭದಾಯಕವಾಗಿ ಬೆಳೆದರೆ ಅದರಿಂದ ಸಾಕಷ್ಟು ಉದ್ಯೋಗ ಸೃಷ್ಟಿ ಆಗುತ್ತದೆ. ಆತ್ಮಶಕ್ತಿಯ 33 ಶಾಖೆಗಳ ಮೂಲಕ 200ಕ್ಕೂ ಅಧಿಕ ಜನರಿಗೆ ಕೆಲಸ ಲಭಿಸಿದೆ. ಆತ್ಮಶಕ್ತಿ ಸಹಕಾರಿಯು ಅಭೂತಪೂರ್ವವಾಗಿ ಬೆಳೆಯಲು ಚಿತ್ತಣ್ಣನ ಕ್ರಿಯಾಶೀಲತೆಯ ಜೊತೆಗೆ ನಿರ್ದೇಶಕರ ಹಾಗೂ ಸಿಬ್ಬಂದಿಗಳ ಉತ್ತಮ ಕಾರ್ಯನಿರ್ವಹಣೆಯೂ ಇದೆ. ಸುರತ್ಕಲ್ ಭಾಗದಲ್ಲಿ ಇರುವ ಅವಕಾಶ ಬೆಳೆಸಿಕೊಂಡು ಇನ್ನಷ್ಟು ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಶೆಟ್ಟಿ ತಡಂಬೈಲ್ ಮಾತನಾಡಿ, 13 ವರ್ಷಗಳಿಂದ ಆತ್ಮಶಕ್ತಿ ಸಂಸ್ಥೆಯು ಜಿಲ್ಲಾದ್ಯಂತ ಉತ್ತಮ ಸೇವೆ ನೀಡುತ್ತಿದೆ. ಕ್ರಿಯಾಶೀಲ ನಾಯಕತ್ವ, ನುರಿತ ಸಿಬ್ಬಂದಿಗಳು, ಉತ್ತಮ ನಿರ್ದೇಶಕ ಮಂಡಳಿ ಆತ್ಮಶಕ್ತಿ ಸಂಸ್ಥೆಯ ಬೆಳವಣಿಗೆಯ ಹಿಂದೆ ಇದೆ. ಈ ಸಂಸ್ಥೆ ರಾಜ್ಯಮಟ್ಟದಲ್ಲಿ ಉನ್ನತವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

100 ಶಾಖೆಗಳು ಆಗಲಿ
ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಮನಸ್ಸು ಮಾಡಿದರೆ ಹೇಗೆ ಬೆಳೆಯಬಹುದು, ಏನು ಮಾಡಬಹುದು ಎಂಬುದನ್ನು ಆತ್ಮಶಕ್ತಿ ಸಹಕಾರಿ ಸಂಸ್ಥೆ ಮಾಡಿ ತೋರಿಸಿದೆ. ಎಲ್ಲಿ ಕ್ರಿಯಾಶೀಲ ನಾಯಕತ್ವ, ದಕ್ಷ ಆಡಳಿತ ಮಂಡಳಿ, ನುರಿತ ಸಿಬ್ಬಂದಿಗಳು ಒಂದು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಾರೋ ಅಲ್ಲಿ ಮೇಲ್ಮುಖವಾಗಿ ಬೆಳೆಯಬಹುದು ಎಂಬುದಕ್ಕೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಉತ್ತಮ ಉದಾಹರಣೆ. ಒಂದು ಸಂಸ್ಥೆ ಸಣ್ಣ ಅವಧಿಯಲ್ಲಿ ಹೇಗೆ ಬೆಲೆಯಬಹುದು ಎಂಬುದನ್ನು ಆತ್ಮಶಕ್ತಿ ಸಹಕಾರಿ ಸಂಸ್ಥೆ ಮಾಡಿ ತೋರಿಸಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಉತ್ತಮವಾಗಿ ಸಹಕಾರಿ ಸಂಸ್ಥೆಗಳು ಜನರಿಗೆ ಸೇವೆ ಒದಗಿಸುತ್ತಿವೆ. ಆತ್ಮಶಕ್ತಿ ಸಹಕಾರಿ ಸಂಸ್ಥೆಯು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದು ಬೇಗ 100 ಶಾಖೆಗಳು ಆಗಲಿ ಎಂದು ಹಾರೈಸಿದರು.

ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಆಗಿ ಬೆಳೆಯಲಿ
ಸಹಕಾರ ಸಂಘಗಳ ನಿವೃತ್ತ ಉಪನಿಬಂಧಕ ಚಂದ್ರಶೇಖರ ಸುವರ್ಣ ಮಾತನಾಡಿ, ಆತ್ಮಶಕ್ತಿ ಸಹಕಾರಿಯು 12 ವರ್ಷದ ಅವಧಿಯಲ್ಲಿ 33 ಶಾಖೆ ತೆರೆದು ಅತ್ಯುತ್ತಮವಾಗಿ ಕೆಲಸ ಮಾಡಿ ಹಲವಾರು ಪ್ರಶಸ್ತಿ ಪಡೆದಿದೆ. ಇದು ಆತ್ಮಶಕ್ತಿ ಸಹಕಾರಿಯ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಹಾಗೂ ಅವರ ನಿರ್ದೇಶಕ ಮಂಡಳಿಯ ಕ್ರಿಯಾಶೀಲತೆಗೆ ಸಾಕ್ಷಿ. ಒಂದು ಆರ್ಥಿಕ ಸಂಸ್ಥೆ ಉನ್ನತವಾಗಿ ಅದು ನೀಡುವ ಸೇವೆ ಮುಖ್ಯವಾಗುತ್ತದೆ. ಈ ಸಂಸ್ಥೆಯನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದರಿಂದ ಸದಸ್ಯರ ಮನಸ್ಸು ಗೆದ್ದಿದೆ. ಯಾವುದೇ ಸಂಸ್ಥೆ ಉತ್ತಮವಾಗಿ ಬೆಳೆಯಬೇಕಾದರೆ ಮೊದಲಿಗೆ ಸದಸ್ಯರ ಮನಸ್ಸು ಗೆಲ್ಲಬೇಕು. ಅದು ಸಾಧ್ಯ ಆಗಿದ್ದರಿಂದ ಆತ್ಮಶಕ್ತಿ ಇಷ್ಟು ಬೆಳೆಯಲು ಸಾಧ್ಯವಾಗಿದೆ. ಮುಂದೆ ಇದು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಆಗಿ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಜಯಾನಂದ ಎಂ ಮಾತನಾಡಿ, ಆತ್ಮಶಕ್ತಿ ಸಂಸ್ಥೆಯ ಸಿಬ್ಬಂದಿಗಳ ಅವಿರತ ಶ್ರಮದಿಂದ ಅತ್ಯದ್ಭುತ ಪ್ರಗತಿ ಸಾಧ್ಯವಾಗಿದೆ. ಇದಕ್ಕೆ ಎಲ್ಲರೂ ಕಾರಣರು. ಬದ್ಧತೆ, ತ್ಯಾಗ, ಪ್ರೀತಿ ಇದ್ದರೆ ಉನ್ನತವಾಗಿ ಬೆಳೆಯಬಹುದು ಎಂಬುದನ್ನು ಈ ಸಂಸ್ಥೆ ಮಾಡಿ ತೋರಿಸಿದೆ. ಗ್ರಾಹಕ ನಮ್ಮ ವಠಾರಕ್ಕೆ ಬರುವಾಗ ಅವರನ್ನು ಅತ್ಯಂತ ಪ್ರೀತಿಯಿಂದ ಎದುರುಗೊಳ್ಳಬೇಕು. ಅವರಿಗೆ ನಾವು ಮಾಡುವ ಸೇವೆ ತಲುಪಬೇಕು. ಅಂಥ ಸೇವೆ ಕೊಟ್ಟ ಸಂಸ್ಥೆ ಬೆಳೆಯುತ್ತದೆ. ಆತ್ಮಶಕ್ತಿ ಸಹಕಾರಿಯಲ್ಲಿ ಇದು ಸಾಧ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್, 13 ವರ್ಷಗಳಿಂದ ಸದಸ್ಯರಿಗೆ ಉತ್ತಮ ಮೊತ್ತದ ಡಿವಿಡೆಂಡ್ ಕೊಡಬೇಕಾದರೆ ನಿರಂತರವಾಗಿ ಲಾಭದಾಯಕ ಆಗಿರಬೇಕು. ನಮ್ಮ ಎಲ್ಲಾ ಶಾಖೆಗಳಲ್ಲಿ ಸ್ಟ್ಯಾಂಪ್ ಪೇಪರ್ ಅನ್ನು ಸಂಜೆ 5.30ರ ತನಕ ಕೊಡುತ್ತಿದ್ದೇವೆ. ಇದಕ್ಕೆ ಕಾರಣ ನಮ್ಮ ಸಿಬ್ಬಂದಿಗಳು. ಎಲ್ಲ ಕಡೆ ಅರೋಗ್ಯ ಶಿಬಿರ ಆಯೋಜನೆ ಮಾಡುತ್ತಿದ್ದೇವೆ. ವಾರ್ಷಿಕ ಒಂದು ಕೋಟಿಗೂ ಮಿಕ್ಕಿ ಆರೋಗ್ಯ ವಿಮೆ ಮಾಡುತ್ತಿದ್ದೇವೆ. ಮುಂದೆ ಆರೋಗ್ಯ ವಿಮೆ ಸೌಲಭ್ಯ ಒದಗಿಸುತ್ತೇವೆ ಎಂದು ಹೇಳಿದರು.
ಸುರತ್ಕಲ್ ಶಾಖೆ ಜೊತೆ ಉತ್ತಮ ಸಂಬಂಧ ಹೊಂದಿರುವ ಸದಸ್ಯರಾದ ಉಮಾ ಕೆ, ರವಿಕಲಾ ಬಿ.ರೈ, ಸದಾಶಿವ ಕೆ, ಸೀತಾಲಕ್ಷ್ಮಿ ಕುಳಾಯಿ, ಚಂದ್ರಶೇಖರ ರೈ ನಾನಿಲ್, ಮಾಧವ ಎಂ.ಅಂಚನ್, ಸದಾನಂದ ಎಚ್.ವಿ, ಬಿ.ರಾಜಾರಾಮ ಸೋಮಯಾಜಿ, ಬಾಲಕೃಷ್ಣ, ಸುಂದರ್ ಎಚ್.ಆರ್, ಭಾಸ್ಕರ್, ನರೇಂದ್ರ ಐ, ರಾಜು ಮೊಯಿಲಿ ಅವರನ್ನು ಗೌರವಿಸಲಾಯಿತು. ಬಿಲ್ಲವ ಸಮಾಜ ಸೇವಾ ಸಂಘ ಇಡ್ಯಾ, ಸುರತ್ಕಲ್ ಇದರ ಅಧ್ಯಕ್ಷರಾದ ಯಮುನಾ ಶೇಖ, ಕುಳಾಯಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೇಶವ ಸುವರ್ಣ, ಬಿಲ್ಲವ ಸಮಾಜ ಸಂಘ ಹಳೆಯಂಗಡಿ ಇದರ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಯುವವಾಹಿನಿ ಪಣಂಬೂರು, ಕುಳಾಯಿ ಘಟಕದ ಅಧ್ಯಕ್ಷ ಧನಿಶ್ ಕುಳಾಯಿ, ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಮಾಜಿ ಅಧ್ಯಕ್ಷರಾದ ಚೆನ್ನಕೇಶವ, ಶೈಲೇಂದ್ರ ಸುವರ್ಣ, ಕಟ್ಟಡದ ಮಾಲೀಕ ಸತೀಶ್ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಜಿ.ಪರಮೇಶ್ವರ ಪೂಜಾರಿ, ಆನಂದ ಎಸ್.ಕೊಂಡಾಣ, ಸೀತಾರಾಮ್ ಎನ್., ರಮಾನಾಥ ಸನಿಲ್, ಮುದ್ದು ಮೂಡುಬೆಳ್ಳೆ, ದಿವಾಕರ್ ಬಿ.ಪಿ., ಗೋಪಾಲ್ ಎಂ., ಉಮಾವತಿ ಪಾಲ್ಗೊಂಡಿದ್ದರು. ಆತ್ಮಶಕ್ತಿ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಸ್ವಾಗತಿಸಿದರು. ಸಹಾಯಕ ಪ್ರಬಂಧಕ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ ವಂದಿಸಿದರು. ಬ್ರಾಂಚ್ ಮ್ಯಾನೇಜರ್ ಸುಮನಾ ಸಹಕರಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

