ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಳ್ಳಾಲ ಶಾಖೆಯ ದಶಮಾನೋತ್ಸವ ಪ್ರಯುಕ್ತ ಉಚಿತ ವೈದ್ಯಕೀಯ, ದಂತ ಚಿಕಿತ್ಸಾ ಹಾಗೂ ನೇತ್ರ ತಪಾಸಣಾ ಶಿಬಿರ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಪಡೀಲ್, ಮಂಗಳೂರು, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಮತ್ತು ಮಹಿಳಾ ವಿಭಾಗ, ಬಂಡಿಕೊಟ್ಯ ಉಳ್ಳಾಲ, ವಿದ್ಯಾರಣ್ಯ ಯುವಕ ವೃಂದ ಮತ್ತು ವಿದ್ಯಾರಣ್ಯ ಕಲಾವೃಂದ ಉಳ್ಳಾಲ ಹಾಗೂ ಶಿವಶಕ್ತಿ ಯುವಕ ಮಂಡಲ ಉಳ್ಳಾಲ ಇವರುಗಳ ಸಂಯುಕ್ತ ಆಶ್ರಯದಲ್ಲಿ ಉಳ್ಳಾಲ ನಗರಸಭೆ ಆವರಣದ ಸಮುದಾಯ ಭವನದಲ್ಲಿ ಜರುಗಿತು.
https://chat.whatsapp.com/EbVKVnWB6rlHT1mWtsgbch
ವಿದ್ಯಾರಣ್ಯ ಯುವಕ ವೃಂದದ ಗೌರವಾಧ್ಯಕ್ಷ ವಿಜಯ ಕುಮಾರ್ ಉದ್ಘಾಟಿಸಿದರು. ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ವಿಭಾಗದ ವೈದ್ಯರಾದ ಡಾ|| ನವ್ಯಾ ಕೆ. ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಬ್ಯಾಂಕಿಂಗ್ ಸೇವೆಯ ಜೊತೆಗೆ ಸಾಮಾಜಿಕ ಕಳಕಳಿಯಿಂದ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಈ ಶಿಬಿರದಲ್ಲಿ ಉಚಿತ ದಂತ ತಪಾಸಣೆ ಮತ್ತು ಸಲಹೆ, ಹಲ್ಲುಗಳ ಶುಚಿ, ಹಲ್ಲುಗಳ ಭರ್ತಿಗೊಳಿಸುವ ಚಿಕಿತ್ಸೆ, ಚಿಕಿತ್ಸೆಗೆ ಒಳಪಡದ ಮತ್ತು ಬಹಳ ಕೆಟ್ಟಿರುವ ಹಲ್ಲುಗಳನ್ನು ಕೀಳುವ ಜೊತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಸಿರು ಕಾರ್ಡ್ ನೀಡಿ ಆಸ್ಪತ್ರೆಯಲ್ಲೂ ಹೆಚ್ಚಿನ ಸೇವೆ ನೀಡಲಾಗುವುದು ಎಂದು ಹೇಳಿದರು.

ಕೆ.ಎಂ.ಸಿ. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರ್ಬಟ್ ಪಿರೇರಾ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ಕೆ.ಎಂ.ಸಿ. ಆಸ್ಪತ್ರೆಯು ಹಲವಾರು ಉಚಿತ ಶಿಬಿರಗಳನ್ನು ಆಯೋಜನೆ ಮಾಡಿದ್ದು, ಇವರು ಶಿಬಿರಗಳನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡುತ್ತಿದ್ದಾರೆ. ಈ ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಮಾಡಲಾಗುವುದು, ಬಿ.ಪಿ. ಮತ್ತು ಮಧುಮೇಹ ತಪಾಸಣೆ, ಎಲುಬು, ಕೀಲು, ಕಿವಿ, ಮೂಗು, ಗಂಟಲು ತಪಾಸಣೆ, ಜನರಲ್ ವೈದ್ಯಕೀಯ ಸಮಾಲೋಚನೆ, ಉಚಿತ ಔಷಧ ನೀಡಲಾಗುವುದು. ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆಯುವಂತೆ ವಿನಂತಿಸಿದರು.

ವಿದ್ಯಾರಣ್ಯ ಕಲಾವೃಂದ ಉಳ್ಳಾಲ ಇದರ ಮಾಜಿ ಅಧ್ಯಕ್ಷ ರವೀಂದ್ರ ರಾಜ್ ಮಾತನಾಡಿ, ಉಳ್ಳಾಲದ ಪರಿಸರದಲ್ಲಿ ಚಿತ್ತರಂಜನ್ ಬೋಳಾರ ನೇತೃತ್ವದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಮಾಡುತ್ತಿರುವ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ‘ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತಿವರ್ಷ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಾ ಬಂದಿದ್ದು, ಇದು ಸಂಘದ 85ನೇ ಉಚಿತ ವೈದ್ಯಕೀಯ ಶಿಬಿರವಾಗಿದೆ. ಈ ಕಾರ್ಯಕ್ರಮವು ಉಳ್ಳಾಲದ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ನಮ್ಮ ಸಹಕಾರಿ ಸಂಘವು ಪ್ರಮುಖ ಪಾತ್ರ ವಹಿಸಿದೆ. ಸಂಘವು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಸಹಕಾರ ನೀಡಿದೆ. ಅದೇ ರೀತಿ ಇಂತಹ ಆರೋಗ್ಯ ಶಿಬಿರವನ್ನು ಏರ್ಪಡಿಸಲು ಸಹಕರಿಸುತ್ತಿರುವ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಮಂಗಳೂರು ಇದರ ಆಡಳಿತ ವರ್ಗ , ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕರಾದ ಗೋಪಾಲ್ ಎಮ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ವಾಮನ್ ಕೆ, ಕೆ.ಎಂ.ಸಿ. ಆಸ್ಪತ್ರೆಯ ವೈದ್ಯರಾದ ಡಾ. ಅನನ್ಯ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ವಿಭಾಗದ ವೈದ್ಯರಾದ ಡಾ|| ಶಿನಾಜ್ ಕುಮಾರ್, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಬಂಡಿಕೊಟ್ಯ, ಉಳ್ಳಾಲ ಇದರ ಗೌರವ ಅಧ್ಯಕ್ಷ ಅಶೋಕ್ ಧರ್ಮನಗರ, ಅಧ್ಯಕ್ಷ ಪ್ರಶಾಂತ್, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘದ ಮಹಿಳಾ ವಿಭಾಗದ ಅಧ್ಯಕ್ಷರಾದ ರೂಪ ಧರ್ಮನಗರ, ವಿದ್ಯಾರಣ್ಯ ಯುವಕ ವೃಂದದ ಗೌರವ ಅಧ್ಯಕ್ಷ ವಿಜಯ ಕುಮಾರ್, ವಿದ್ಯಾರಣ್ಯ ಕಲಾವೃಂದ ಉಳ್ಳಾಲ ಇದರ ಅಧ್ಯಕ್ಷ ಜಯ ಉಳ್ಳಾಲ, ವಿದ್ಯಾರಣ್ಯ ಯುವಕ ವೃಂದದ ಅಧ್ಯಕ್ಷ ಪ್ರವೀಣ್ ಸುವರ್ಣ, ಕಾರ್ಯಾಧ್ಯಕ್ಷ ಧನು ಪೂಜಾರಿ ಉಳ್ಳಾಲ್ ಉಪಸ್ಥಿತರಿದ್ದರು. 150ಕ್ಕೂ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ, ಉಚಿತ ಓಷಧಿ ವಿತರಣೆ, ದಂತ ಚಿಕಿತ್ಸಾ ಹಾಗೂ ನೇತ್ರ ತಪಾಸಣೆ ನಡೆಸಲಾಯಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಿರಿಯ ಶಾಖಾಧಿಕಾರಿ ಸೌಮ್ಯಲತಾ ಸ್ವಾಗತಿಸಿ, ಹಿರಿಯ ಶಾಖಾಧಿಕಾರಿ ಯಶವಂತಿ ವಂದಿಸಿದರು. ಹಿರಿಯ ಶಾಖಾಧಿಕಾರಿ ಶ್ರೀ ಸಚಿನ್ ಕೊಡ್ಮನ್ ಕಾರ್ಯಕ್ರಮ ನಿರ್ವಹಿಸಿದರು.

